ಝಮೀರ್ ಅಹ್ಮದ್ ರನ್ನು ಕ್ವಾರಂಟೈನ್ ಮಾಡಬೇಕೆಂಬ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

Update: 2020-04-22 11:52 GMT

ಬೆಂಗಳೂರು, ಎ.22:  ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಕೇಂದ್ರ ಸರಕಾರ ಸ್ಯಾನಿಟೈಸ್ ಗೆ ಬಳಸಿಕೊಳ್ಳುವುದು ಸರಿಯಲ್ಲ. ಸರಕಾರದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯಿದ್ದರೆ ಬಡವರಿಗೆ ಉಚಿತವಾಗಿ ನೀಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಬಿಟಿಎಂ ಲೇಔಟ್ ಸುತ್ತಮುತ್ತಲಿನ ಕೂಲಿ ಕಾರ್ಮಿಕರು ಹಾಗೂ ನಿಗರ್ತಿಕರಿಗೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಉಚಿತವಾಗಿ ಆರಂಭಿಸಿರುವ ದಾಸೋಹ ಕೇಂದ್ರಕ್ಕೆ ಭೇಟಿ ಕೊಟ್ಟು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಲವು ಜನತೆ ಹಸಿವಿನಿಂದ ಸಾಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲಿ ಟೀಕಿಸಿದರು.

ಈಗಾಗಲೇ ಸ್ಯಾನಿಟೈಸ್ ತಯಾರಿಕೆಗೆ ಬೇರೆ ಬೇರೆ ರೀತಿಯ ಕಚ್ಚಾ ಪದಾರ್ಥಗಳಿವೆ. ಇಲ್ಲಿಯವರೆಗೂ ಅದನ್ನೇ ಬಳಸಿ ಸ್ಯಾನಿಟೈಸ್ ತಯಾರಿಸಲಾಗಿದೆ. ಆದರೆ, ಕೇಂದ್ರ ಸರಕಾರ ದಿಢೀರನೆ ಅಕ್ಕಿಯನ್ನು ಸ್ಯಾನಿಟೈಸರ್ ಬಳಸುವುದಕ್ಕೆ ಮುಂದಾಗಿರುವುದನ್ನು ಕೂಡಲೇ ನಿಲ್ಲಿಸಿ, ಆ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲಿ ಎಂದು ಅವರು ಹೇಳಿದರು.

ಬೆಂಗಳೂರು ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರಿದ್ದಾರೆ. ಹೀಗಾಗಿ ಬಿಟಿಎಂ ಲೇಔಟ್‍ನಲ್ಲಿ ರಾಮಲಿಂಗಾರೆಡ್ಡಿ ದಿನನಿತ್ಯ 48 ಸಾವಿರಕ್ಕೂ ಹೆಚ್ಚು ಜನರಿಗೆ ದಿನನಿತ್ಯ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ಬೆಂಗಳೂರಿನಾದ್ಯಂತ ಕೇವಲ ಒಂದು ಲಕ್ಷ ಆಹಾರ ಪ್ಯಾಕೆಟ್‍ಗಳನ್ನು ಒದಗಿಸುತ್ತಿದೆ. ಅದರಲ್ಲೂ ಬಿಜೆಪಿ ಜನಪ್ರತಿನಿಧಿಗಳಿರುವ ಕಡೆಗಳಲ್ಲಿ ಹೆಚ್ಚು ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹಸಿವಿನ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಈ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.

ಈಶ್ವರಪ್ಪನದು ಕೊರೋನದಲ್ಲೂ ರಾಜಕೀಯ

ಪಾದರಾಯಪುರ ಘಟನೆಯನ್ನು ಬಳಸಿಕೊಂಡು ಸಚಿವ ಕೆ.ಎಸ್.ಈಶ್ವರಪ್ಪ ರಾಜಕೀಯ ಮಾಡಲು ಹೊರಟಿದ್ದಾರೆ. ಇಲ್ಲಿ ನಡೆದಿರುವ ಘಟನೆಯನ್ನು ಯಾರೂ ಸಮರ್ಥಿಸುತ್ತಿಲ್ಲ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲಿ. ಅದಕ್ಕೆ ಜಾತಿ, ಧರ್ಮ ಬಣ್ಣಗಳನ್ನು ಕಟ್ಟಲು ಹೋಗುವುದು ಸರಿಯಲ್ಲ. ಶಾಸಕ ಝಮೀರ್ ಅಹ್ಮದ್ ಖಾನ್‍ರನ್ನು ಕ್ವಾರಂಟೈನ್ ಮಾಡಬೇಕು ಎನ್ನುವುದು ಬೇಜವಾಬ್ದಾರಿ ಹೇಳಿಕೆ. ರೋಗ ಲಕ್ಷಣಗಳಿದ್ದರೆ ಕ್ವಾರಂಟೈನ್ ಮಾಡುವುದು ಸರಿ. ಆದರೆ, ಕೊರೋನ ಲಕ್ಷಣಗಳೇ ಇಲ್ಲದವರನ್ನ ಕ್ವಾರಂಟೈನ್ ಮಾಡಿ ಎನ್ನುವುದು ರಾಜಕೀಯ ಹೇಳಿಕೆಯಷ್ಟೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News