ಕೊರೋನ ವಾರಿಯರ್ಸ್ ಮೇಲಿನ ಹಲ್ಲೆ ತಡೆಗೆ ಕೇರಳ, ಉ.ಪ್ರ. ಮಾದರಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Update: 2020-04-22 16:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.22: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್‍ಗಳು, ಪೊಲೀಸರ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಹಾಗೂ ಉತ್ತರಪ್ರದೇಶದಲ್ಲಿ ಜಾರಿಗೆ ತರಲಾಗಿರುವ ಕಾಯ್ದೆಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಹೊರಡಿಸಲಾಗಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

ಕೋವಿಡ್-19 ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸಲು ಮುಂದಾಗಿದ್ದ ವೇಳೆ ಇತ್ತೀಚೆಗೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘರ್ಷಣೆಯ ಬೆನ್ನಲ್ಲೆ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯಂತೆ ಸರಕಾರದ ಸೂಚನೆಯಂತೆ ಯಾರು ಕಾರ್ಯ ನಿರ್ವಹಿಸುವುದಿಲ್ಲವೋ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೆ, ಉದ್ದೇಶಪೂರ್ವಕವಾಗಿ ಈ ರೋಗವನ್ನು ಹರಡಿಸಲು ಪ್ರಯತ್ನಪಟ್ಟರೆ ಅದೂ ಕೂಡಾ ಶಿಕ್ಷಾರ್ಹ ಅಪರಾಧವೇ ಎಂದು ಪರಿಗಣಿಸಲಾಗುತ್ತದೆ. ಅಂತೆಯೆ, ವದಂತಿ ಸೃಷ್ಟಿಸುವುದು ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ.

ಕೊರೋನ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅಂತಹವರಿಗೆ ಮೂರು ವರ್ಷಗಳ ಜೈಲು ಹಾಗೂ 50 ಸಾವಿರ ರೂ.ಗಳವರೆಗೆ ದಂಡವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಒಂದು ವೇಳೆ ಅಂತಹವರ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲದಿದ್ದರೆ, ಎರಡು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸುವ ಅಂಶಗಳನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಲಾಗಿದೆ.

ಕೇರಳ ಹಾಗೂ ಉತ್ತರಪ್ರದೇಶದಲ್ಲಿ ಈಗಾಗಲೇ ಇಂತಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ವಿಧಾನಮಂಡಲದ ಅಧಿವೇಶನ ಕರೆಯಲು ಸಾಧ್ಯವಿಲ್ಲದೆ ಇರುವುದರಿಂದ, ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದ್ದು, ಇದೀಗ ರಾಜ್ಯಪಾಲರ ಅಂಕಿತವು ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News