ಶಾಲಾ ಕಟ್ಟಡದಲ್ಲಿಯೇ ಬಂಧಿಯಾದ ಮುಂಬಯಿಗೆ ಹೋಗಿದ್ದ ರಾಜ್ಯದ ಕೂಲಿ ಕಾರ್ಮಿಕರು

Update: 2020-04-23 16:13 GMT

ಕಲಬುರ್ಗಿ, ಎ.23: ಮುಂಬಯಿಗೆ ದಿನಗೂಲಿ ಕೆಲಸಕ್ಕೆ ಹೋಗಿದ್ದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ವಿವಿಧ ತಾಂಡಾಗಳ 40ಕ್ಕೂ ಹೆಚ್ಚು ಕಾರ್ಮಿಕರು ಪುಣೆ ಮಾರ್ಗದ ಪಿಪರಿ ಚಿಂಚನಸೂರದ ಶಾಲಾ ಕಟ್ಟಡದಲ್ಲಿಯೇ 26 ದಿನಗಳಿಂದ ಬಂಧಿಯಾಗಿದ್ದಾರೆ. 

ಲಾಕ್‍ಡೌನ್ ಜಾರಿಯಾದ ಬಳಿಕ ಮುಂಬೈ ನಗರದಿಂದ ಹೊರಟ ಚಿಂಚೋಳಿ ತಾಲೂಕಿನ ತಾಂಡದ ಜನರನ್ನು ಪಿಪರಿ ಚಿಂಚನಸೂರಿನಲ್ಲಿ ಪೊಲೀಸರು ಮುಂದೆ ಹೋಗದಂತೆ ತಡೆದು ಸ್ಥಳೀಯ ಶಾಲೆಯಲ್ಲಿ ಇರಿಸಿದ್ದಾರೆ. ತಾಂಡಾದ ಜನತೆ ನಾವು ಈಗಾಗಲೇ 200 ಕಿ.ಮೀ ನಡೆದುಕೊಂಡು ಬಂದಿದ್ದೇವೆ. ಹೀಗಾಗಿ, ನಮಗೆ ಊರಿಗೆ ಹೋಗಲು ಅವಕಾಶ ಕೊಡಿ ಎನ್ನುತ್ತಿದ್ದಾರೆ. 

ನಮ್ಮ ಜೊತೆಗೆ ಎದೆ ಹಾಲು ಕುಡಿಯುವ ಕಂದಮ್ಮಗಳು, 10 ಮಕ್ಕಳು ಸೇರಿ ಒಟ್ಟು 49 ಜನರು ಇಲ್ಲಿ ಇದ್ದೇವೆ. 2 ದಿನಗಳಿಂದ ಹಾಲು ಕೊಡುವುದನ್ನು ಬಂದ್ ಮಾಡಿದ್ದಾರೆ. ದಾನಿಗಳೇ ಸದ್ಯಕ್ಕೆ ಚಹಾವನ್ನು ಒದಗಿಸುತ್ತಿದ್ದಾರೆ ಎಂದು 49 ಜನರಲ್ಲಿ ಒಬ್ಬರಾಗಿರುವ ಅನಿಲ್ ಅವರು ಹೇಳುತ್ತಾರೆ.

ಇಲ್ಲಿಗೆ ಬಂದ ಮೇಲೆ ನಮಗೆ ಕಾಯುವುದಕ್ಕೆ ಪೊಲೀಸರನ್ನು ನಿಯೋಜಿಸಿದ್ದಾರೆ. ಮೊದಲ ದಿನವೇ ಎಲ್ಲರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಯಾರೂ ಅನಾರೋಗ್ಯಕ್ಕೆ ಒಳಗಾಗಿಲ್ಲ. ಏನಾದರೂ ಮಾಡಿ ನಮ್ಮನ್ನು ನಮ್ಮ ಊರಿಗೆ ಕರೆಸಿಕೊಳ್ಳಿ. ಈ ಸೆರೆಮನೆ ವಾಸದಿಂದ ಮುಕ್ತಿ ಕೊಡಿಸಿ ಎಂದರೆ ನಮ್ಮ ಗೋಳು ಯಾರೊಬ್ಬರು ಕೇಳಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಮತ್ತೆಷ್ಟು ದಿನ ನಾವು ಈ ಶಿಕ್ಷೆ ಅನುಭವಿಸಬೇಕೆಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ. ಸ್ವಂತ ಊರಲ್ಲಿ ದುಡಿಯಲು ಕೆಲಸವಿಲ್ಲ ಎಂದು ಮುಂಬೈಗೆ ಬಂದೆವು. ಆದರೆ, ಈಗ ಇಲ್ಲಿ ಕೆಲಸಗಳು ಬಂದ್ ಆಗಿದ್ದರಿಂದ ಊರಿಗೆ ನಡೆದುಕೊಂಡು ಹೋಗಬೇಕೆಂದರೂ ಬಿಡುತ್ತಿಲ್ಲ. ನಾವು ಮಾಡಿದ ತಪ್ಪಾದರೂ ಏನು ಎಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News