×
Ad

ಮುಸ್ಲಿಮರಿಂದ ಹಣ್ಣು, ತರಕಾರಿ ಕೊಳ್ಳಲು ಜನರ ಹಿಂದೇಟು

Update: 2020-04-23 23:05 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.23: ಕಳೆದ ತಿಂಗಳು ನವದೆಹಲಿಯಲ್ಲಿ ನಡೆದಿದ್ದ ತಬ್ಲೀಗಿ ಸಭೆಯಲ್ಲಿ ಪಾಲ್ಗೊಂಡವರು ಮುಸ್ಲಿಮರು. ಮನೆ ಬಳಿಗೆ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ತರುತ್ತಿರುವ ವ್ಯಾಪಾರಿಗಳೂ ಮುಸ್ಲಿಮರು. ಸಮಾವೇಶದಲ್ಲಿ ಪಾಲ್ಗೊಂಡ ಯಾರಾದರೂ ಇವರ ಸಂಬಂಧಿಗಳಾಗಿದ್ದರೆ ಕೊರೋನ ವೈರಸ್ ಹರಡುವ ಅಪಾಯ ಇದೆ ಎಂದು ಸುದ್ದಿ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು ಸುದ್ದಿ ಹಬ್ಬಿಸಿದವು. ಹೀಗಾಗಿ ಅವರನ್ನು ದೂರವಿಡಬೇಕು, ಅವರಿಂದ ದೂರವಿರಬೇಕು ಎಂಬ ಕೆಲವು ಜನರ ಆಲೋಚನೆ, ಬಡ ಮುಸ್ಲಿಮರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಕೆಲವು ದಿನಗಳ ಹಿಂದೆ ನಗರದ ಮಲ್ಲೇಶ್ವರಂನಲ್ಲಿ ಹಣ್ಣು, ತರಕಾರಿ ಮಾರಲು ಬಂದ ಮುಸ್ಲಿಂ ವ್ಯಾಪಾರಿ ಫಯಾಝ್ ಎಂಬವರನ್ನು ಅಲ್ಲಿನ ನಿವಾಸಿಗಳು, ‘ನೀನು ಇನ್ನು ಮುಂದೆ ಇಲ್ಲಿಗೆ ಬರಬೇಡ. ಬೇರೆ ಏರಿಯಾ ನೋಡಿಕೋ’ ಎಂದು ಹೇಳಿದರು.

‘ನಾನು ಸುಮಾರು ಹತ್ತು ವರ್ಷಗಳಿಂದ ಇದೇ ಏರಿಯಾದಲ್ಲಿ ಹಣ್ಣು, ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಬಳಿ ಮಾರಾಟಗಾರರ ಬಳಿ ಇರುವ ಪಾಸ್ ಇದೆ. ಆದರೆ, ನಾನು ಮುಸ್ಲಿಂ ಎಂಬ ಕಾರಣಕ್ಕೆ ನನ್ನ ಬಳಿ ವ್ಯವಹರಿಸಲು ಯಾರೂ ಮುಂದೆ ಬರುತ್ತಿಲ್ಲ. ಏನನ್ನೂ ಮಾರಾಟ ಮಾಡದೇ ಮನೆಗೆ ಹೋದರೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು’ ಎಂದು ಫಯಾಜ್ ತಮ್ಮ ಅಳಲನ್ನು 'ವಾರ್ತಾಭಾರತಿ'ಯೊಂದಿಗೆ ತೋಡಿಕೊಂಡರು.

ನಗರದ ಕಲಾಸಿಪಾಳ್ಯದಲ್ಲಿರುವ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿ ವ್ಯಾಪಾರ ಮಾಡುತ್ತಿದ್ದವರಲ್ಲಿ ಬಹುತೇಕರು ಮುಸ್ಲಿಮರೇ ಆಗಿದ್ದರು. ಈಗ ಅಲ್ಲಿ ವ್ಯಾಪಾರ ಸಂಪೂರ್ಣ ಬಂದ್ ಮಾಡಿ ಹುಸ್ಕೂರ್ ಗೇಟ್ ಬಳಿ ಇರುವ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಇಲ್ಲಿ ಯಾರೂ ಕೂಡ ಬಂದು ವ್ಯಾಪಾರ ಮಾಡುತ್ತಿಲ್ಲ. ಕೊರೋನ ವೈರಸ್ ಅನ್ನು ಮುಸ್ಲಿಮರೇ ಹಬ್ಬಿಸುತ್ತಿದ್ದಾರೆ ಎಂಬ ವದಂತಿಯಿಂದ ನಮ್ಮ ವ್ಯವಹಾರ ಕುಂಠಿತವಾಗಿದೆ. ಮನೆ- ಮನೆಗೆ ಹೋಗಿ ಹಣ್ಣು, ತರಕಾರಿ ಮಾರಲು ಕೆಲವರು ಅವಕಾಶ ಕೊಟ್ಟರೆ, ಮಿಕ್ಕ ಕೆಲವರು ಬಡಾವಣೆಗಳಲ್ಲಿ ಬಿಟ್ಟುಕೊಳ್ಳುತ್ತಿಲ್ಲ ಎಂಬುದು ಹಲವು ಮುಸ್ಲಿಂ ವ್ಯಾಪಾರಿಗಳ ನೋವಾಗಿದೆ.

ಅಲ್ಲದೇ, ಬೆಂಗಳೂರು ನಗರದಲ್ಲಿ ಋತುಮಾನಕ್ಕೆ ತಕ್ಕಂತೆ ಹಣ್ಣುಗಳನ್ನು ಬುಟ್ಟಿಯಲ್ಲಿ ಹೊತ್ತು ಮಾರುತ್ತಿದ್ದವರು, ಹಾಗೆಯೇ ತರಕಾರಿ ಎಂದು ಕೂಗುಹಾಕುತ್ತಾ ಬೀದಿಗೆ ಬರುತ್ತಿದ್ದವರು ಬಹುತೇಕ ಮುಸ್ಲಿಂ ಬಡ ಕುಟುಂಬಗಳ ಮಹಿಳೆಯರೇ ಆಗಿದ್ದರು. ಹಿಂದೆ ಅವರೊಂದಿಗೆ ಪ್ರೀತಿಯಿಂದ ವ್ಯಾಪಾರ ಮಾಡುತ್ತಿದ್ದ ಜನರೇ ಇಂದು ಅವರಿಂದ ಹಣ್ಣು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿರುವ ವಿದ್ಯಮಾನ ಸದ್ಯ ಎದ್ದುಕಾಣುತ್ತಿದೆ.

ಲಾಕ್‍ಡೌನ್ ಇರುವುದರಿಂದ ಇದ್ದ ಜಾಗದಲ್ಲಿ ಮೊದಲಿನಂತೆ ಮುಸ್ಲಿಮ್ ವ್ಯಾಪಾರಿಗಳಿಗೆ ವ್ಯಾಪಾರ ನಡೆಯುತ್ತಿಲ್ಲ. ಮನೆ ಮನೆಗೆ ಹೋದವರಿಗೂ ಅವಮಾನ ಕಾಡದೆ ಬಿಡುತ್ತಿಲ್ಲ. ಅಂದಂದಿನ ಕೂಲಿ ಸಂಪಾದಿಸಿಕೊಳ್ಳುವುದಕ್ಕೂ ಜಾತಿ-ಧರ್ಮಗಳ ಬೇಲಿ ಅಡ್ಡಬಂದಿದ್ದು ವಿಪರ್ಯಾಸ.

ಈ ಕೊರೋನ ಲಾಕ್‍ಡೌನ್‍ನಿಂದ ತರಕಾರಿ ವ್ಯಾಪಾರ ನಿಂತು ಹೋಗಿದೆ. ಅಲ್ಲದೇ ಕಲಾಸಿಪಾಳ್ಯದಿಂದ ಸಿಂಗೇನ ಅಗ್ರಹಾರಕ್ಕೆ ಮಾರುಕಟ್ಟೆ ಸ್ಥಳಾಂತರ ಮಾಡಿದ್ದರಿಂದ ಸಾಕಷ್ಟು ತೊಂದರೆ ಉಂಟಾಗಿದೆ. ನಮ್ಮ ಬಳಿ ಪಾಸ್ ಇಲ್ಲ. ಸ್ಥಳೀಯವಾಗಿ ಮಾರಾಟ ಮಾಡೋಣವೆಂದರೆ ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.

-ಶಮೀಲ್, ಹೋಲ್‍ಸೇಲ್ ತರಕಾರಿ ವ್ಯಾಪಾರಿ, ಕಲಾಸಿಪಾಳ್ಯ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News