ಮಾಸ್ಕ್ ಹಾಕಿಕೊಂಡು ಜೂಜಾಟ: 8 ಮಂದಿಯ ಬಂಧನ

Update: 2020-04-23 17:41 GMT

ಬೆಂಗಳೂರು, ಎ.23: ಲಾಕ್‍ಡೌನ್ ನಡುವೆಯೂ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳು ಜೂಜಾಟ ವೇಳೆ ಮಾಸ್ಕ್ ಧರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದ ನಿವಾಸಿಗಳಾದ ರಾಜು, ಚಂದ್ರಪ್ಪ, ಚಲುವಯ್ಯ, ಕಾರ್ತಿಕ್, ಪ್ರವೀಣ್, ವಿಜಯ್, ಲೋಕೇಶ್ ಹಾಗೂ ಮಂಜುನಾಥ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ದೊಮ್ಮಸಂದ್ರ ಮುತ್ತನಲ್ಲೂರು ಕ್ರಾಸ್‍ನಲ್ಲಿರುವ ಆರ್ ಎಸ್‍ಬಿ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ಸದಸ್ಯರಲ್ಲದವರನ್ನು ಗುಂಪುಗೂಡಿಸಿಕೊಂಡು ಇಸ್ಪೀಟ್ ಆಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು  ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳಿಂದ 60 ಸಾವಿರ ರೂ. ನಗದು ಜಪ್ತಿ ಮಾಡಲಾಗಿದ್ದು, ಈ ಸಂಬಂದ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News