ಧಾರವಾಡ: ಸರಕಾರಿ ಕ್ವಾರಂಟೈನ್‍ದಲ್ಲಿದ್ದ 63 ಜನರ ಬಿಡುಗಡೆ

Update: 2020-04-23 17:59 GMT

ಧಾರವಾಡ, ಎ.23: ಕೊವೀಡ್-19 ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕಾರಣದಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದ ವಿವಿಧೆಡೆ ಸರಕಾರಿ ಕ್ವಾರಂಟೈನ್‍ಗೆ ಒಳಪಟ್ಟಿದ್ದ 63 ಜನರನ್ನು ಇಂದು ಸಪ್ನಾ ಬುಕ್‍ಹೌಸ್‍ನ ಗಿಫ್ಟ್ ಓಚರ್ ಹಾಗೂ ಸಂಜಯ್ ಗೊಡಾವತ್ ಅವರು ನೀಡಿದ ಆಹಾರಧಾನ್ಯದ ಕಿಟ್‍ಗಳನ್ನು ನೀಡಿ ಬೀಳ್ಕೊಡಲಾಯಿತು. ಜಿಲ್ಲಾಡಳಿತ, ವೈದ್ಯರ ಶ್ರಮಕ್ಕೆ ನಿರ್ಗಮಿತ ವ್ಯಕ್ತಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಎ.2ರಿಂದ 20  ರವರೆಗೆ ಒಟ್ಟು 303 ಜನರನ್ನು ಸರಕಾರಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಅವರಲ್ಲಿ ನಿನ್ನೆ 84 ಜನರನ್ನು ಹಾಗೂ ಇಂದು 63 ಜನರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. 14 ದಿನಗಳ ಪ್ರತ್ಯೇಕ ವಾಸದಲ್ಲಿ 5ನೇ ದಿನ ಮೊದಲ ಬಾರಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗುತ್ತದೆ.

12ನೆ ದಿನ ಎರಡನೇಯ ಬಾರಿ ತಪಾಸಣೆ ನಡೆಸಲಾಗುತ್ತದೆ. ಎರಡೂ ತಪಾಸಣಾ ವರದಿಗಳು ನೆಗೆಟಿವ್ ಬಂದ ನಂತರ ಅಂತಹ ವ್ಯಕ್ತಿಗಳನ್ನು ಸರಕಾರಿ ಕ್ವಾರಂಟೈನ್‍ನಿಂದ ಬಿಡುಗಡೆ ನಂತರ ಅವರ ಮನೆಯಲ್ಲಿಯೇ 14 ದಿನ ಪ್ರತ್ಯೇಕವಾಗಿ ವಾಸಿಸಬೇಕು ಎಂದು ಸೂಚನೆ ನೀಡಿ ಅವರ ಕೈ ಮೇಲೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದ ಮೊಹರು ಹಾಕಿ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ನೋಡಲ್ ವೈದ್ಯಾಧಿಕಾರಿ ಡಾ. ಶಶಿ ಪಾಟೀಲ ಹೇಳಿದರು.

ಕ್ವಾರಂಟೈನ್‍ನಿಂದ ಬಿಡುಗಡೆಯಾದ ಮಕ್ಬೂಲ್ ಬಸಾಪುರ ಮಾತನಾಡಿ, ಸರಕಾರವು ಮಾರ್ಚ್ ತಿಂಗಳಿನಲ್ಲಿ ತಬ್ಲಿಗಿ ಜಮಾಅತ್ ಕಾರ್ಯಕ್ರಮಕ್ಕೆ ದಿಲ್ಲಿಗೆ ಹೋಗಿ ಬಂದವರು ಕ್ವಾರಂಟೈನ್‍ಗೆ ಒಳಪಡಬೇಕು ಎಂದು ಸೂಚಿಸಿತ್ತು. ನಾನು ಫೆಬ್ರವರಿ ತಿಂಗಳಲ್ಲಿಯೆ ಅಲ್ಲಿಗೆ ಹೋಗಿ ಬಂದಿದ್ದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ವಇಚ್ಚೆಯಿಂದ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಭೇಟಿಯಾಗಿ ವಿಷಯ ತಿಳಿಸಿದೆ. ಅವರು ತಪಾಸಣೆಗೊಳಪಡಿಸಿ 14 ದಿನಗಳ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸಲಹೆ ಮಾಡಿದರು.

ಕುಟುಂಬ, ಮಕ್ಕಳ ಹಿತದೃಷ್ಟಿಯಿಂದ ನಾನು ಕ್ವಾರಂಟೈನ್‍ಗೆ ಒಳಪಟ್ಟೆ. ಈ ಅವಧಿಯಲ್ಲಿ ಸರಕಾರ ಮತ್ತು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ತವ್ಯ ನಿರತ ವೈದ್ಯರು, ನರ್ಸ್‍ಗಳು ಹಾಗೂ ಸಿಬ್ಬಂದಿ ವರ್ಗದವರು ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾದ ಊಟ, ಉಪಾಹಾರದ ವ್ಯವಸ್ಥೆ ಮಾಡಿದ್ದಾರೆ. ರೋಗ ಲಕ್ಷಣ ಇರುವವರು ಸ್ವಇಚ್ಛೆಯಿಂದ ಮುಂದೆ ಬಂದು ಚಿಕಿತ್ಸೆ ತೆಗೆದುಕೊಂಡು ಕೊರೋನ ನಿಯಂತ್ರಿಸಲು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಕ್ವಾರಂಟೈನ್ ಕರ್ತವ್ಯ ನಿರ್ವಹಿಸಿದ ಡಾ.ಕಿರಣ ಸಾಣಿಕೊಪ್ಪ ಮಾತನಾಡಿ, ಆಯುಷ್ ವೈದ್ಯರು ರಾಜ್ಯಾದ್ಯಂತ ಕ್ವಾರಂಟೈನ್ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮಲ್ಲಿ ಹೆಮ್ಮೆ ಮೂಡಿಸಿದೆ. ಸರಕಾರವೂ ನಮ್ಮ ಸೇವೆ ಗುರುತಿಸಿದೆ. ಜಿಲ್ಲಾಡಳಿತ ಎಲ್ಲ ಸಮರ್ಪಕ ವ್ಯವಸ್ಥೆಗಳನ್ನು ಮಾಡಿದೆ ಎಂದರು. ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೇರ್, ತಹಶೀಲ್ದಾರರಾದ ಸಂತೋಷ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಅಯ್ಯನ್‍ಗೌಡ ಪಾಟೀಲ ಮತ್ತಿತರರು ಬಿಡುಗಡೆಯಾದ ವ್ಯಕ್ತಿಗಳಿಗೆ ಆಹಾರಧಾನ್ಯದ ಕಿಟ್ ಹಾಗೂ ಗಿಫ್ಟ್ ಓಚರ್‍ಗಳನ್ನು ನೀಡಿ ಕಳುಹಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News