ರಾಜ್ಯಾದ್ಯಂತ ಶನಿವಾರದಿಂದ ರಮಝಾನ್ ಉಪವಾಸ: ಮೌಲಾನ ಸಗೀರ್ ಅಹ್ಮದ್

Update: 2020-04-24 14:44 GMT

ಬೆಂಗಳೂರು, ಎ.24: ಕರಾವಳಿ ಜಿಲ್ಲೆಗಳು ಹೊರತುಪಡಿಸಿ ಪವಿತ್ರ ರಮಝಾನ್ ಮಾಸದ ಉಪವಾಸಗಳು ಶನಿವಾರ(ಎ.25) ದಿಂದ ರಾಜ್ಯಾದ್ಯಂತ ಆರಂಭವಾಗಲಿದೆ ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಪವಿತ್ರ ರಮಝಾನ್ ಮಾಸದ ಮೊದಲ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೆ ಉಪವಾಸಗಳು ಆರಂಭವಾಗಲಿವೆ ಎಂದರು.

ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್ ಮಾತನಾಡಿ, ಪವಿತ್ರ ರಮಝಾನ್ ಮಾಸವನ್ನು ನಾವು ಸ್ವಾಗತಿಸಿದ್ದೇವೆ. ಪ್ರತಿಯೊಬ್ಬ ಮುಸ್ಲಿಮರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡದೆ, ತಮ್ಮ ತಮ್ಮ ಮನೆಗಳಲ್ಲೆ ಐದು ಹೊತ್ತಿನ ನಮಾಝ್ ಹಾಗೂ ತರಾವೀಹ್ ನಮಾಝ್ ಅನ್ನು ಕುಟುಂಬ ಸದಸ್ಯರೊಂದಿಗೆ ನಿರ್ವಹಿಸಬೇಕು. ಯಾರೊಬ್ಬರೂ ಮಸೀದಿಗಳತ್ತ ತೆರಳಬಾರದು ಎಂದರು.

ಪ್ರತಿಯೊಬ್ಬ ಆರೋಗ್ಯವಂತ ಮುಸ್ಲಿಮರು ಕಡ್ಡಾಯವಾಗಿ ಉಪವಾಸ ವ್ರತವನ್ನು ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ತಮ್ಮ ನೆರೆ ಹೊರೆಯವರು, ಸಂಬಂಧಿಕರು, ಸ್ನೇಹಿತರನ್ನು ಒಟ್ಟುಗೂಡಿಸಿ ತರಾವೀಹ್ ನಮಾಝ್ ಅನ್ನು ನಿರ್ವಹಿಸಲು ಮುಂದಾಗಬೇಡಿ. ಒಂದು ವೇಳೆ ನೀವೇನಾದರೂ ಇಂತಹ ಕೆಲಸಕ್ಕೆ ಕೈ ಹಾಕಿದರೆ, ಕೇವಲ ನೀವು ಮಾತ್ರ ಆಪಾದನೆ ಹೊತ್ತುಕೊಳ್ಳುವುದಿಲ್ಲ. ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News