ಶಾಸಕ ಭರತ್ ಶೆಟ್ಟಿ ಕುರಿತು ಚರ್ಚೆಗೆ ಮಾಧ್ಯಮಗಳಿಗೆ ದಿನೇಶ್‍ ಅಮಿನ್ ಮಟ್ಟು ಸವಾಲು

Update: 2020-04-24 15:52 GMT

ಬೆಂಗಳೂರು, ಎ.24: ಕೊರೋನ ಸೋಂಕಿಗೆ ಬಲಿಯಾದ ಮಹಿಳೆಯ ಅಂತ್ಯ ಸಂಸ್ಕಾರವನ್ನು ತನ್ನ ಒಪ್ಪಿಗೆ ಇಲ್ಲದೆ ನಡೆಸಬಾರದೆಂದು ಫರ್ಮಾನು ಹೊರಡಿಸಿದ ದಕ್ಷಿಣ ಕನ್ನಡದ ಸುರತ್ಕಲ್ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಕುರಿತು ಟಿವಿ ಚಾನೆಲ್‍ಗಳು ಕಾರ್ಯಕ್ರಮ ನಡೆಸಲು ಸಿದ್ಧರಿದ್ದಾರೆಯೇ ಎಂದು ಹಿರಿಯ ಪತ್ರಕರ್ತ ದಿನೇಶ್‍ ಅಮಿನ್ ಮಟ್ಟು ಸವಾಲು ಹಾಕಿದ್ದಾರೆ.

ಶುಕ್ರವಾರ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಬೆಂಗಳೂರಿನ ಪಾದರಾಯನಪುರದ ಗಲಾಟೆಗೆ ಸ್ಥಳೀಯ ಶಾಸಕ ಝಮೀರ್ ಅಹ್ಮದ್‍ ಖಾನ್ ಕಾರಣ ಎಂದು ವಿಚಾರಣೆ ಇಲ್ಲದೆ ತೀರ್ಪು ನೀಡಿದ ಮಾಧ್ಯಮಗಳು, ಶಾಸಕರನ್ನು ಬಂಧಿಸುವಂತೆ ಎರಡು ದಿನಗಳವರೆಗೆ ಆರ್ಭಟಿಸಿದ್ದಾರೆ. ಈಗ ಶಾಸಕ ಭರತ್ ಶೆಟ್ಟಿ ವಿರುದ್ಧ ಆರ್ಭಟಿಸಬಲ್ಲರೇ ಎಂದು ಪ್ರಶ್ನಿಸಿದ್ದಾರೆ.

ಪಾದರಾಯನಪುರದಲ್ಲಿ ತಪಾಸಣೆ ನಡೆಸಲು ರಾತ್ರಿ ಹೋಗುವುದು ಬೇಡ. ಹಗಲಿಗೆ ಬನ್ನಿ, ನಾನೂ ಜೊತೆಯಲ್ಲಿ ಬರುತ್ತೇನೆ ಎಂಬ ಶಾಸಕ ಝಮೀರ್ ಅಹ್ಮದ್‍ ಖಾನ್‍ ರವರ ಹೇಳಿಕೆಯನ್ನೇ, ಆ ಕ್ಷೇತ್ರವೇನು ಝಮೀರ್ ರವರ ಸ್ವಂತ ಆಸ್ತಿಯೇ. ಅವರನ್ನು ಯಾಕೆ ಕೇಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಝಮೀರ್ ಅಹ್ಮದ್‍ ಖಾನ್ ವಿರುದ್ಧ ಅಬ್ಬರಿಸಿದರು. ಈಗ ಭರತ್ ಶೆಟ್ಟಿ ಬೆದರಿಕೆಗೆ ಏನು ಹೇಳುತ್ತಾರೆ.

ಶಾಸಕ ಭರತ್‍ ಶೆಟ್ಟಿ ಹಿಂದೂಗಳು ನಾವೆಲ್ಲ ಒಂದು ಎಂಬ ಘೋಷಣೆಯ ಬಲದಿಂದಲೇ ಚುನಾವಣೆಯಲ್ಲಿ ಗೆದ್ದವರು. ಆದರೆ, ಮೃತ ಹಿಂದು ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ಆ ಮೃತದೇಹವನ್ನು ಅನಾಥ ಮಾಡಿದರು. ಆದರೆ, ಶಾಸಕ ಝಮೀರ್ ಅಹ್ಮದ್‍ ಖಾನ್ ತನ್ನ ಧರ್ಮದ ಮಹಿಳೆ ಮೃತಪಟ್ಟಾಗ ಯಾವ ಸೋಂಕಿಗೂ ಅಂಜದೆ ಮೃತದೇಹಕ್ಕೆ ಹೆಗಲು ಕೊಟ್ಟವರು. ಅಷ್ಟು ಮಾತ್ರವಲ್ಲ, ಕೊರೋನ ಸೋಂಕಿನಿಂದ ಯಾವ ಧರ್ಮದವರು ಸತ್ತರೂ ಅವರಿಗೆ ಯಾರು ಧಿಕ್ಕಿಲ್ಲದಿದ್ದರೆ ನಾನೇ ಹೋಗಿ ಅಂತ್ಯ ಸಂಸ್ಕಾರ ಮಾಡುತ್ತೇನೆಂದು ಹೇಳಿದ್ದಾರೆ.

ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಕಲ್ಲಡ್ಕದ ಪ್ರಭಾಕರ ಭಟ್ಟರು, ಹಿಂದುಗಳ ಹತ್ಯೆ ಮಾಡಿದವರ ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಮೊದಲಾದ ಹಿಂದೂ ಧರ್ಮ ರಕ್ಷಕರೇನಾದರೂ ಮೃತ ಹಿಂದೂ ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆಯೇ ಎಂದು ದಿನೇಶ್‍ ಅಮಿನ್ ಮಟ್ಟು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News