ಶಾಸಕರ ನೇತೃತ್ವದಲ್ಲಿ ನಡೆದ ಮನುಷ್ಯತ್ವದ ಅಂತ್ಯ ಸಂಸ್ಕಾರ

Update: 2020-04-25 06:19 GMT

ಇಂದು ಮನುಷ್ಯರಲ್ಲಿ ಕೊರೋನ ಸೋಂಕಿದೆಯೇ ಎಂದು ಜಗತ್ತಿನಾದ್ಯಂತ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನ ಕೂಡ ಮನುಷ್ಯನನ್ನು ಪರೀಕ್ಷಿಸುತ್ತಿದೆ ಎಂಬ ಅಂಶವನ್ನು ನಾವು ಮರೆಯಬಾರದು. ಈ ಪರೀಕ್ಷೆಯಲ್ಲಿ ಸೋತರೆ, ಮಾನವೀಯತೆಯೇ ಸೋತಂತೆ. ನಾವು ಕಟ್ಟಿಕೊಂಡ ನಾಗರಿಕತೆ, ಹೆಮ್ಮೆ ಪಡುವ ವಿಜ್ಞಾನ, ಆಧುನಿಕತೆ ತಂತ್ರಜ್ಞಾನ ಇವೆಲ್ಲವುಗಳ ಸೋಲು. ಮನುಷ್ಯನ ನಿಜ ಬಣ್ಣ ಬಯಲಾಗುವುದು ಸಂಕಟಗಳು ಬಂದಾಗ ಎನ್ನುವ ಮಾತಿದೆ. ಇಂದು ಕೊರೋನದ ವಿರುದ್ಧ ಜಯ ಸಾಧಿಸಬೇಕಾದರೆ ಮೊತ್ತ ಮೊದಲು ಮನುಷ್ಯರು ಪರಸ್ಪರ ಮನುಷ್ಯತ್ವವನ್ನು ಕಳೆದುಕೊಳ್ಳದೆ ಇರುವುದು ಮುಖ್ಯ. ಸಂಕಟಗಳಿಗೆ ಪರಸ್ಪರ ನೆರವಾಗುತ್ತಾ, ದುಃಖಿತರನ್ನು ಸಂತೈಸುತ್ತಾ, ಭರವಸೆಗಳನ್ನು ಹಂಚಿಕೊಳ್ಳುತ್ತಾ ಕೊರೋನ ಮಾಡುತ್ತಿರುವ ಪರೀಕ್ಷೆಯನ್ನು ನಾವು ಗೆಲ್ಲಬೇಕಾಗಿದೆ. ದುರದೃಷ್ಟಕ್ಕೆ ಈ ಸಂಕಟದ ದಿನಗಳಲ್ಲಿ ಕೊರೋನ ವೈರಸ್‌ನ ಜೊತೆ ಜೊತೆಗೇ ಮನುಷ್ಯನ ಮೆದುಳಿಗೆ ಅಂಟಿಕೊಂಡಿರುವ ಇನ್ನಿತರ ವೈರಸ್‌ಗಳು ಕೂಡ ಸಮಾಜವನ್ನು ಕಾಡ ತೊಡಗಿವೆ.

‘ತಾನೊಬ್ಬ ಬದುಕಿದರೆ ಸಾಕು’ ಎನ್ನುವ ಮನುಷ್ಯ ಸ್ವಾರ್ಥ ಹೇಗೆ ಸಹ ಮನುಷ್ಯನ ಕುರಿತಂತೆ ಕ್ರೂರವಾಗಿ ವರ್ತಿಸಬಹುದು ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯ ಅಂತ್ಯ ಸಂಸ್ಕಾರ ಗೈಯುವುದನ್ನು ಶಾಸಕರ ನೇತೃತ್ವದಲ್ಲೇ ಸಂಘಪರಿವಾರದ ಗುಂಪು ತಡೆದ ಘಟನೆ ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯಿತು. ಪರಿಣಾಮವಾಗಿ ಮೃತದೇಹವನ್ನು ಹಿಡಿದುಕೊಂಡು ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುವ ದಯನೀಯ ಸ್ಥಿತಿಯನ್ನು ಕುಟುಂಬ ಅನುಭವಿಸಬೇಕಾಯಿತು. ಕೆಲವೊಮ್ಮೆ ಜನಸಾಮಾನ್ಯರು ಮಾಹಿತಿಗಳಿಲ್ಲದೆ ಅಥವಾ ಮೌಢ್ಯಗಳ ಕಾರಣದಿಂದ ಇಂತಹ ಅನಾಹುತಗಳಿಗೆ ಕಾರಣರಾಗುತ್ತಾರೆ. ಆದರೆ ಇಲ್ಲಿ ಈ ದುರಂತಕ್ಕೆ ಶಾಸಕರೇ ನೇತೃತ್ವವನ್ನು ವಹಿಸಿರುವುದು ಆಘಾತಕಾರಿ. ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರು ‘ತನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಶವ ಸಂಸ್ಕಾರ ನಡೆಸಲು ಅನುಮತಿ ನೀಡುವುದಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಪರಿಸ್ಥಿತಿ ಉದ್ವಿಗ್ನಗೊಳ್ಳಲು ಮುಖ್ಯ ಕಾರಣವಾಯಿತು. ಕ್ಷೇತ್ರವೆನ್ನುವುದು ಶಾಸಕನ ಸ್ವಂತ ಪಿತ್ರಾರ್ಜಿತ ಆಸ್ತಿಯೇನೂ ಅಲ್ಲ. ವೈದ್ಯರ ಸೂಚನೆ, ಮಾರ್ಗದರ್ಶನದಡಿಯಲ್ಲೇ ಶವಸಂಸ್ಕಾರ ಮಾಡಲು ಜಿಲ್ಲಾಡಳಿತ ಮುಂದಾದಾಗ, ಅದನ್ನು ತಡೆಯುವ ಯಾವ ನೈತಿಕ ಹಕ್ಕೂ ಶಾಸಕರಿಗಿಲ್ಲ.

ಕೊರೋನ ದೇಶಾದ್ಯಂತ ಜನಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿರುವ ಈ ಹೊತ್ತಿನಲ್ಲಿ ಶಾಸಕರೇ ಈ ಮೂಲಕ ಕೊರೋನಾ ವೈರಸ್‌ನ್ನು ಜನರ ಪಾಲಿಗೆ ಭೀಕರವಾಗಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿಯವರೂ ನಡೆದ ಘಟನೆ ಬಗ್ಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿದ್ದಾರೆ. ‘‘ನನ್ನ ಗಮನಕ್ಕೆ ತರದೇ ಶವಸಂಸ್ಕಾರ ಮಾಡಲು ಮುಂದಾಗಿರುವುದು ಗೊಂದಲಕ್ಕೆ ಕಾರಣವಾಯಿತು. ಕ್ಷೇತ್ರದ ಜನರು ಈ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಶವ ಸಂಸ್ಕಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಬೇಕಾಯಿತು’’ ಎಂದು ಹೇಳಿ ಅವರು ಒಟ್ಟು ಪ್ರಕರಣದ ಗಂಭೀರತೆಯನ್ನು ತಗ್ಗಿಸಲು ನೋಡಿದ್ದಾರೆ. ಮುಖ್ಯವಾಗಿ ಭರತ್ ಶೆಟ್ಟಿ ವೃತ್ತಿಯಲ್ಲಿ ವೈದ್ಯರು ಕೂಡ. ಮುಂಜಾಗ್ರತೆಯೊಂದಿಗೆ ಕೊರೋನ ಸೋಂಕಿತ ಮೃತದೇಹವನ್ನು ಸುಡುವುದರಿಂದ ಸೋಂಕು ಹರಡುವುದಿಲ್ಲ ಎನ್ನುವುದು ವೈದ್ಯರಾಗಿ ಅವರಿಗೆ ಗೊತ್ತಿರಬೇಕು ಮತ್ತು ತನಗೆ ಅದರ ಅರಿವಿದೆ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಅಂದರೆ, ತನ್ನ ಹಿಂಬಾಲಕರನ್ನು ಓಲೈಸುವುದಕ್ಕಾಗಿ ಶವಸಂಸ್ಕಾರಕ್ಕೆ ವಿರೋಧ ಸೂಚಿಸಿದ್ದಾರೆ. ಕೊರೋನ ಕುರಿತಂತೆ ಇಂದು ಸಮಾಜದಲ್ಲಿ ನೂರಾರು ಮೌಢ್ಯಗಳಿವೆ. ಆ ಮೌಢ್ಯಗಳನ್ನು ನಿವಾರಿಸಿ ಜನರನ್ನು ಶಿಕ್ಷಿತರನ್ನಾಗಿಸುವುದು, ಪ್ರಜ್ಞಾವಂತರಾಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರು ಏನೇನೋ ತಪ್ಪು ಕಲ್ಪನೆಗಳನ್ನು ಕಟ್ಟಿಕೊಂಡು ಗುಂಪು ಗೂಡಿದರೆ ಅವರ ರಾಗಕ್ಕೆ ತಾಳ ಹಾಕುವುದು ಜನಪ್ರತಿನಿಧಿಯ ಕೆಲಸವಲ್ಲ. ಇಷ್ಟಕ್ಕೂ ಮೃತ ವೃದ್ಧೆಯ ಕುಟುಂಬದ ದುಃಖದ ಹೊಣೆಗಾರಿಕೆಯೂ ಶಾಸಕರಿಗೇ ಸೇರಿದ್ದು. ಆ ಕುಟುಂಬ ಪಾಕಿಸ್ತಾನ ಅಥವಾ ಬಾಂಗ್ಲಾದಿಂದ ಬಂದಿರುವುದಲ್ಲ. ನ್ಯಾಯಯುತವಾಗಿ ಮತ್ತು ಗೌರವಯುತವಾಗಿ ಶವಸಂಸ್ಕಾರ ಮಾಡುವ ಎಲ್ಲ ಅಧಿಕಾರ, ಹಕ್ಕು ಅವರಿಗೆ ಇರುವಾಗ, ಯಾರೋ ಒಂದಿಷ್ಟು ಪುಂಡು ಪೋಕರಿಗಳ ಮಾತು ಕೇಳಿ ಹಕ್ಕನ್ನು ನಿರಾಕರಿಸುವುದು ಎಷ್ಟು ಸರಿ?

ಇತ್ತೀಚೆಗೆ ಪಾದರಾಯನ ಪುರದಲ್ಲಿ ನಡೆದ ದಾಂಧಲೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ. ‘‘ಜನರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಹಗಲು ಹೋಗೋಣ, ರಾತ್ರಿ ಹೋಗುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ನನಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ರಾತ್ರಿ ಭೇಟಿ ನೀಡಿರುವುದು ಅನಾಹುತಕ್ಕೆ ಕಾರಣವಾಯಿತು’’ ಎಂದು ಅಲ್ಲಿನ ಶಾಸಕ ಝಮೀರ್ ಅಹ್ಮದ್ ಅವರು ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಯಿತು. ಆದರೆ, ಬಡ ಕಾರ್ಮಿಕರೇ ಇರುವ ಪ್ರದೇಶಗಳಿಗೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸುವಾಗ ಸ್ಥಳೀಯ ಜನಪ್ರತಿನಿಧಿಯೂ ಇದ್ದರೆ ಅದು ಹೆಚ್ಚು ಪರಿಣಾಮಕಾರಿ. ಆ ಸಂದರ್ಭದಲ್ಲಿ ಜನರ ಮನವೊಲಿಕೆಗಾಗಿ ಸ್ಥಳೀಯ ಜನಪ್ರತಿನಿಧಿಗಳಿದ್ದರೆ ಅನಕೂಲ. ಆದರೂ, ಅಲ್ಲಿನ ಜನರು ಕರ್ತವ್ಯಕ್ಕೆ ಅಡ್ಡಿ ಮಾಡಿರುವುದು ಆಕ್ಷೇಪಣೀಯ. ನಾಡು ಒಕ್ಕೊರಲಲ್ಲಿ ಅದನ್ನು ಖಂಡಿಸಿದೆ. ಆದರೆ ಇದನ್ನೇ ಮುಂದಿಟ್ಟು ಶಾಸಕ ಝಮೀರ್ ಮೇಲೆ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ತೀವ್ರ ದಾಳಿ ನಡೆಸಬಹುದಾದರೆ, ಶಾಸಕರ ನೇತೃತ್ವದಲ್ಲೇ ಒಬ್ಬ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿಯಾಗಿರುವುದು ಯಾಕೆ ಚರ್ಚೆಗೆ ಅರ್ಹವಲ್ಲ? ಇದೇ ಸಂದರ್ಭದಲ್ಲಿ, ಝಮೀರ್ ಅವರು ಮೃತದೇಹವೊಂದರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿರುವುದನ್ನೂ ಟೀಕೆಗೆ ಬಳಸಿಕೊಂಡರು.

‘‘ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು ಮಾನವೀಯತೆಯ ಭಾಗ. ಯಾವುದೇ ಧರ್ಮದ ಜನರು ಮೃತಪಟ್ಟರೂ ತಾನು ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವೆ’’ ಎಂದು ಝಮೀರ್ ಉತ್ತರಿಸಿದರು. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಶಾಸಕನ ವರ್ತನೆಗೆ ಹೋಲಿಸಿದರೆ, ಝಮೀರ್ ವರ್ತನೆ ಎಷ್ಟೋ ಮೇಲು. ಒಂದು ರೀತಿಯಲ್ಲಿ ಉದಾತ್ತವಾದುದು ಎಂದು ಹೇಳಬಹುದು. ಬಿಜೆಪಿಯ ಶಾಸಕ ಮೃತ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು ಪಕ್ಕಕ್ಕಿರಲಿ, ಶವಸಂಸ್ಕಾರಕ್ಕೇ ಅನುಮತಿ ನೀಡಲಿಲ್ಲ. ವಿಪರ್ಯಾಸವೆಂದರೆ, ಈ ಅಮಾನವೀಯ ಕೃತ್ಯದ ವಿರುದ್ಧ ಬಿಜೆಪಿಯ ಮುಖಂಡರು ಈವರೆಗೆ ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ. ಯಾವುದೇ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಲೂ ಇಲ್ಲ. ಇದೇ ಸಂದರ್ಭದಲ್ಲಿ ಶವಸಂಸ್ಕಾರಕ್ಕೆ ಸಂಬಂಧಿಸಿ ಸ್ಥಳೀಯ ಜನರು ಇಷ್ಟೊಂದು ಆತಂಕ ಪಡುವುದರ ಹಿಂದೆ ಮಾಧ್ಯಮಗಳು ಹರಡಿದ ‘ಆತಂಕದ ವೈರಸ್’ಗಳಿವೆ ಎನ್ನುವುದನ್ನು ಗಮನಿಸಬೇಕಾಗಿದೆ.

ಜನರನ್ನು ಜಾಗೃತಿಗೊಳಿಸಬೇಕಾದ, ಅವರಲ್ಲಿ ಧೈರ್ಯ ತುಂಬಬೇಕಾದ ಮಾಧ್ಯಮಗಳು ತಮ್ಮ ಹೊಟ್ಟೆ ಪಾಡಿಗಾಗಿ ಸಮಾಜದಲ್ಲಿ ಬಿತ್ತಿದ ಆತಂಕ, ಭಯದ ಕೊಯ್ಲನ್ನು ಇದೀಗ ನಾವು ಕೊಯ್ಯುತ್ತಿದ್ದೇವೆ. ಮುಂದೆ ಇಂತಹ ಘಟನೆ ನಡೆಯದೇ ಇರಬೇಕಾದರೆ ಜಿಲ್ಲಾಡಳಿತ ತಕ್ಷಣ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಕೊರೋನ ಸೋಂಕಿತರ ಕುರಿತಂತೆ ಅಸಹನೆ, ಆಕ್ರೋಶಗಳನ್ನು ಹೊಂದುವುದು, ಮೃತರ ಬಗ್ಗೆ ಮನುಷ್ಯತ್ವವೇ ಇಲ್ಲದೆ ವರ್ತಿಸುವುದು ಇವೆಲ್ಲ ಮನುಷ್ಯ ವಿರೋಧಿ ಮಾತ್ರವಲ್ಲ, ಕಾನೂನು ವಿರೋಧಿ ಕೂಡ ಎನ್ನುವುದನ್ನು ಜನರಿಗೆ ಸ್ಪಷ್ಟಪಡಿಸಬೇಕು. ಹೇಗೆ ಪಾದರಾಯನ ಪುರದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಲಾಗಿದೆಯೋ ಹಾಗೆಯೇ, ಮಹಿಳೆಯ ಶವಸಂಸ್ಕಾರವನ್ನು ತಡೆದ ದುಷ್ಕರ್ಮಿಗಳನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲಿಸುವುದು ಅತ್ಯಗತ್ಯವಾಗಿದೆ. ಮನುಷ್ಯತ್ವದ ಅಂತ್ಯ ಸಂಸ್ಕಾರದ ನೇತೃತ್ವ ವಹಿಸಿದ ಶಾಸಕರ ವಿರುದ್ಧ ಮುಖ್ಯಮಂತ್ರಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News