ನಾಳೆ ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿ: ಸಚಿವ ಡಾ.ಸುಧಾಕರ್

Update: 2020-04-24 18:12 GMT

ಬೆಂಗಳೂರು, ಎ.24: ಕೇಂದ್ರದಿಂದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಪ್ಲಾಸ್ಮಾ ಥೆರಪಿಗೆ ನಾಳೆ(ಎ.25) ಚಾಲನೆ ದೊರೆಯಲಿದ್ದು, ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿಯನ್ನು ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಬಳಿಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ಲಾಸ್ಮಾ ಥೆರಪಿ ಸಂಬಂಧ ಕೇಂದ್ರಕ್ಕೆ ಪತ್ರವನ್ನು ನೀಡಿದ್ದೆವು. ನಮ್ಮ ಮನವಿಯನ್ನು ಪರಿಗಣಿಸಿರುವ ಸರಕಾರವು ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಥೆರಪಿ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಥೆರಪಿ ಡೋನಾರ್ ಸಹ ಸಿಕ್ಕಿದ್ದಾರೆ ಎಂದು ಮಾಹಿತಿ ನೀಡಿದರು.

ಕೊರೋನ ಬಂದವರನ್ನು ಯಾರೂ ಅಸಹ್ಯದಿಂದ ನೋಡುವಂತಿಲ್ಲ. ಇದು ಸಾಮಾಜಿಕ ಪಿಡುಗು ಅಲ್ಲ. ಸಾಮಾನ್ಯ ಶೀತ, ಜ್ವರ ಬಂದರೆ ಹೇಗೆ ವಾಸಿಯಾಗುತ್ತದೆಯೋ ಅದೇ ರೀತಿ ಇದು ಆಗಿದೆ. ಯಾರೂ ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ಹೀಗಾಗಿ, ಇದನ್ನು ಯಾರೂ ಸಾಮಾಜಿಕ ಪಿಡುಗು ಅಂತೆ ನೋಡಬಾರದು ಎಂದು ಅವರು ಸೂಚಿಸಿದ್ದಾರೆ.

ಕೊರೋನ ಬಂದರೆ ಆತಂಕ ಪಡುವ ಅಗತ್ಯವಿಲ್ಲ. ಬಹಳ ಜನ ಕೊರೋನ ಬಂದರೆ ಕಳಂಕ ಎಂದು ತಿಳಿದುಕೊಂಡಿದ್ದಾರೆ. ಕೊರೋನ ಸಹ ಬೇರೆ ವೈರಸ್ ಥರ ಒಂದು ವೈರಸ್. ಶೇ.97 ಕೊರೋನಾ ಪೀಡಿತರು ಗುಣಮುಖರಾಗಿದ್ದಾರೆ. ಸೀಲ್‍ಡೌನ್ ಮಾಡಿದ ಕೂಡಲೇ ರೋಗ ಹೋಗುವುದಿಲ್ಲ. ಹೀಗಾಗಿ, ಹೇಗೆ ರಕ್ಷಣೆ ತಗೋಬೇಕು, ಅಂತರ ಕಾಯ್ದುಕೊಳ್ಳಬೇಕು ಅನ್ನೋದನ್ನು ತಿಳಿಯಬೇಕು ಎಂದು ಸುಧಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News