ಸರಕಾರಕ್ಕೆ ಮೆದುಳು ಇಲ್ಲ, ದೇಹವೂ ಇಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

Update: 2020-04-24 18:16 GMT

ಮಂಡ್ಯ, ಎ.24: ಬೆಂಗಳೂರು ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.‌ಡಿ.ಕುಮಾರಸ್ವಾಮಿ, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಕೆಆರ್​ಎಸ್​​​​ನಲ್ಲಿ ನಿರಾಶ್ರಿತರಿಗೆ ತರಕಾರಿ, ದಿನಸಿ ವಿತರಿಸಿ ಮಾತನಾಡಿದ ಅವರು, ‌ಆರಂಭದಲ್ಲೇ ರಾಮನಗರಕ್ಕೆ ಆರೋಪಿಗಳನ್ನ ಕರೆತರುವುದನ್ನು ವಿರೋಧಿಸಿದ್ದೆ. ಆಗ ಮುಖ್ಯಮಂತ್ರಿ, ಗೃಹ ಸಚಿವರು ಸಹ ಒಪ್ಪಿದ್ದರು. ಆದರೂ, ಅಧಿಕಾರಿಗಳ ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿದ್ದಾರೆ ಎಂದು ಕಿಡಿಕಾರಿದರು.

ಶಂಕಿತರನ್ನು ಸ್ಥಳಾಂತರಿಸಿದ ಪರಿಣಾಮ 5 ಮಂದಿಗೆ ಕೊರೋನ ಬಂದಿದೆ. ಹೀಗಾಗಿ, ಕಾರಾಗೃಹವನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕಿದೆ. ಆ ಪ್ರದೇಶವನ್ನ ಲಾಕ್​​ಡೌನ್ ಮಾಡಬೇಕು. ಕಾರಾಗೃಹ ಸಿಬ್ಬಂದಿ ಮೇಲೆ ನಿಗಾವಹಿಸಬೇಕಿದೆ. ಸರಕಾರವನ್ನ ತಪ್ಪು ದಾರಿಗೆ ಎಳೆದ ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಒತ್ತಾಯ ಮಾಡಿದರು.

ಗ್ರೀನ್ ಜೋನ್ ಜಿಲ್ಲೆಯನ್ನು ರೆಡ್ ಜೋನ್ ಮಾಡಲು ಹೊರಟಿದ್ದಾರೆ. ನಾನು ರಾಮನಗರಕ್ಕೆ ಸೀಮಿತವಾಗಿ ಮಾತನಾಡುತ್ತಿಲ್ಲ. ರಾಮನಗರ ಕೂಡ ಕರ್ನಾಟಕದಲ್ಲಿದೆ ಎಂಬುದನ್ನು ತಿಳಿಯಬೇಕು ಎಂದು ತಿರುಗೇಟು ನೀಡಿದರು.

ಆಶಾ ಕಾರ್ಯಕರ್ತೆ ಆತ್ಮಹತ್ಯೆ ಯತ್ನ ವಿಫಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರಕಾರದ ಹೇಳಿಕೆಗಳು ಪತ್ರಿಕೆಗಳಿಗಷ್ಟೇ ಸೀಮಿತವಾಗಿದೆ. ಕೊರೋನ ವಾರಿಯರ್ಸ್ ವಿರುದ್ಧ ದೌರ್ಜನ್ಯ ನಡೆದರೆ ಜೈಲು ಖಚಿತ ಎಂದಿದ್ದರು. ಸರಕಾರ ಹೇಳಿದ್ದರೂ ಮಂಡ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆದಿದೆ. ಆಸ್ಪತ್ರೆಯಲ್ಲಿರುವ ಆಶಾ ಕಾರ್ಯಕರ್ತೆಯನ್ನ ಸರಕಾರ ಭೇಟಿ ಮಾಡಿಲ್ಲ ಎಂದರು.

ಐಟಿ, ಬಿಟಿ ಪುನರಾರಂಭಕ್ಕೆ ಸರಕಾರ ನಿರ್ಧರಿಸಿದೆ. ಐಟಿ, ಬಿಟಿ ಕಥೆ ಇರಲಿ, ಅವರು ಮನೆಯಲ್ಲೇ ಕೂತು ಕೆಲಸ ಮಾಡಬಹುದು. ಆದರೆ, ರೈತರ ಪರವಾಗಿ ಏನು ಮಾಡುತ್ತಿದ್ದಾರೆ ಎಂದು ಅವರು  ಪ್ರಶ್ನಿಸಿದರು.

ಉಪಮುಖ್ಯಮಂತ್ರಿಗೆ ಪರಿಜ್ಞಾನ ಇದೆಯೇ? ತಪಾಸಣೆ ಮಾಡಿಯೇ ಆರೋಪಿಗಳ ಸ್ಥಳಾಂತರಿಸಿದ್ದೇವೆ ಎನ್ನುತ್ತಾರೆ. ಸರಕಾರಕ್ಕೆ ದೇಹವೂ ಇಲ್ಲ, ಮೆದುಳು ಇಲ್ಲ. ಉಪಮುಖ್ಯಮಂತ್ರಿಗೆ ದುಡ್ಡು ಹೊಡೆಯೋದು ಅಷ್ಟೇ ಗೊತ್ತು. ಕೊರೋನ ಹೆಸರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಇದೆಲ್ಲವನ್ನೂ ಈಗಲೇ ಹೇಳಲ್ಲ. ಸಮಯ ಬಂದಾಗ ಹೇಳುತ್ತೇನೆ"
-ಎಚ್.ಡಿ.ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News