ಹುಟ್ಟೂರು ಕೊಪ್ಪದ ತೋಟದ ಮನೆಯಲ್ಲಿ ಮಹೇಂದ್ರ ಕುಮಾರ್ ಅಂತ್ಯಸಂಸ್ಕಾರ

Update: 2020-04-25 14:59 GMT

ಚಿಕ್ಕಮಗಳೂರು, ಎ.25: ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದ ಬಜರಂಗದಳ ಮಾಜಿ ರಾಜ್ಯ ಸಂಚಾಲಕ, ಚಿಂತಕ ಮಹೇಂದ್ರ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಕೊಪ್ಪ ಪಟ್ಟಣ ಸಮೀಪದ ಮೇಲಿನಪೇಟೆಯ ಅವರ ತೋಟದ ಮನೆಯಲ್ಲಿ ಶನಿವಾರ ರಾತ್ರಿ ನೆರವೇರಿಸಲಾಯಿತು.

ಶನಿವಾರ ಮುಂಜಾನೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮಹೇಂದ್ರ ಕುಮಾರ್ ನಿಧನರಾಗಿದ್ದು, ಅವರ ಅಂತಿಮ ಸಂಸ್ಕಾರವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪ ಸಮೀಪದಲ್ಲಿರುವ ಮಹೇಂದ್ರ ಕುಮಾರ್ ಅವರ ತೋಟದ ಮನೆಯಲ್ಲಿ ಬೆಳಗ್ಗೆಯಿಂದಲೇ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿತ್ತು. ಮಹೇಂದ್ರ ಕುಮಾರ್ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅವರ ಹಿತೈಶಿಗಳು, ಸ್ನೇಹಿತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೋಟದ ಮನೆಗೆ ಆಗಮಿಸಿ ತಾಯಿ ಹಾಗೂ ಹತ್ತಿರದ ಸಂಬಂಧಿಗಳಿಗೆ ಸಾಂತ್ವನ ಹೇಳಿದರು.

ಶನಿವಾರ ಮಧ್ಯಾಹ್ನ ಮಹೇಂದ್ರ ಕುಮಾರ್ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಚಿಕ್ಕಮಗಳೂರು ಮಾರ್ಗವಾಗಿ ಕೊಪ್ಪ ಪಟ್ಟಣ ಸಮೀಪದಲ್ಲಿರುವ ತೋಟದ ಮನೆಗೆ ತರಲಾಯಿತು. ಮನೆಯ ಬಳಿ ಮಹೇಂದ್ರ ಕುಮಾರ್ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ನಿಂದ ಹೊರ ತರುತ್ತಿದ್ದಂತೆ ಮಹೇಂದ್ರ ಅವರ ತಾಯಿ ಸೇರಿದಂತೆ ಪತ್ನಿ, ಮಕ್ಕಳು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ತೋಟದ ಮನೆ ಆವರಣದಲ್ಲಿ ನೆರೆದಿದ್ದವರು ಮಹೇಂದ್ರ ಕುಮಾರ್ ಅವರ ಅಂತಿಮ ದರ್ಶನ ಪಡೆದರು.

ಬಳಿಕ ಮನೆ ಸಮೀಪದ ತೋಟದಲ್ಲಿ ಮಹೇಂದ್ರ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ಸಂದರ್ಭ ಸಚಿವ ಸಿ.ಟಿ.ರವಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಜೀವರಾಜ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ತೋಟದ ಮನೆ ಆವರಣದಲ್ಲಿ ಜನರು ಗುಂಪಾಗಿ ಸೇರುವುದನ್ನು ಪೊಲೀಸರು ನಿಯಂತ್ರಿಸಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹೇಂದ್ರ ಕುಮಾರ್ ಅವರ ಸಾವಿರಾರು ಸ್ನೇಹಿತರು, ಅಭಿಮಾನಿಗಳು ಅವರ ದರ್ಶನ ಪಡೆಯಲಾಗಲಿಲ್ಲ. ಹೀಗಾಗಿ ಪೇಸ್‍ಬುಕ್ ಲೈವ್‍ನಲ್ಲಿ ಕೆಲವರು ಅವರ ಅಂತಿಮ ದರ್ಶನ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News