ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡುತ್ತೇನೆಂದ ವ್ಯಕ್ತಿಗೆ ಪೊಲೀಸರಿಂದ ನೋಟಿಸ್

Update: 2020-04-25 14:58 GMT
ನಝೀರ್ ಅಹಮದ್

ಮೈಸೂರು,ಎ.25: ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗ ಸಿಗದಿದ್ದರೆ ತನ್ನ ಜಾಗವನ್ನು ನೀಡುವುದಾಗಿ ಘೋಷಿಸಿದ್ದ ವ್ಯಕ್ತಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೈಸೂರು ಮೂಲದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನಝೀರ್ ಅಹಮದ್ ಎಂಬುವವರು ಎ.24 ರಂದು ಸಾಮಾಜಿಕ ಜಾಲತಾಣದಲ್ಲಿ 'ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗ ಸಿಗದಿದ್ದರೆ ನನ್ನ ಸೈಟಿ ಅನ್ನು ಬಳಸಬಹುದು. ಹಿಂದೂಗಳಿಗೆ ಮೊದಲ ಆದ್ಯತೆ' ಎಂಬ ಪೋಸ್ಟ್ ಹಾಕಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಪಾಂಡವಪುರ ಪೊಲೀಸರು ನಝೀರ್ ಅಹಮದ್ ರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

"ನಿಮ್ಮ ಈ ಪೋಸ್ಟ್ ನಿಂದ ಸದ್ಯದ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಬೇರೆ ರೀತಿಯ ಸಂದೇಶ ಹೋಗಲಿದ್ದು, ಇದರಿಂದ ಮತೀಯ ಭಾವನೆಗಳನ್ನು ಕೆದಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ನಿಮ್ಮ ಮೇಲೆ ಏಕೆ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ ಕೂಡಲೇ ನಿಮ್ಮ ಲಿಖಿತ ಉತ್ತರವನ್ನು ನೀಡುವುದು. ತಪ್ಪಿದಲ್ಲಿ ನಿಮ್ಮ ಮೇಲೆ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುವುದು' ಎಂದು ಲಿಖಿತ ನೋಟಿಸ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News