ಸಕಲೇಶಪುರ: ಈದ್ ಹಬ್ಬಕ್ಕಾಗಿ ಸಂಗ್ರಹಿಸಿದ್ದ ಹಣ ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕರು

Update: 2020-04-25 16:30 GMT

ಸಕಲೇಶಪುರ, ಎ.25: ಈದ್ ಹಬ್ಬಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕೊರೋನ ಸಂತ್ರಸ್ತರ ನಿಧಿಗೆ ದೇಣಿಗೆ ನೀಡುವ ಮೂಲಕ ಇಬ್ಬರು ಬಾಲಕರು ಗಮನ ಸೆಳೆದಿದ್ದಾರೆ.

ಪಟ್ಟಣದ ಹಳೆಸಂತೆಯ, ಶಾಲಾ ವಿದ್ಯಾರ್ಥಿಗಳಾದ ಮುಹಮ್ಮದ್ ಮೆಹರಾಜ್ ಮತ್ತು ಮುಹಮ್ಮದ್ ರಿಯಾನ್ ಈದ್ ಹಬ್ಬಕ್ಕೆಂದು ಶೇಖರಿಸಿಟ್ಟಿದ್ದ ಸುಮಾರು 2,000 ರೂ. ಗಳನ್ನು ತಹಶೀಲ್ದಾರ್ ಮುಖಾಂತರ ಕೊರೋನ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ಅರ್ಪಿಸಿದರು.

ಬಾಲಕರಿಂದ ಹಣ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಇಂತಹ ಕಾರ್ಯಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ. ಇವರ ತಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ತಾಯಿ ನೀಡಿದ ಪಾಕೆಟ್ ಮನಿಯನ್ನು ಸಂಗ್ರಹಿಸಿ ಈದ್ ಹಬ್ಬಕ್ಕೆ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಸಂಗ್ರಹಿಸಿಟ್ಟಿದ್ದರು. ಆದರೆ ಆ ಹಣವನ್ನು ಕೊರೋನ ಸಂತ್ರಸ್ತರಿಗೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. 

ಆಪ್ತಾಬ್ ಆಲಂ ಮತ್ತು ಸುರಯ್ಯ ತಬಸ್ಸುಮ್ ದಂಪತಿ ಪುತ್ರರಾದ ಇವರು ಈ ಹಿಂದೆ ಹಳೆ ಸಂತವೇರಿ ಬಡಾವಣೆಯ ಜನರಿಗೆ ಮಾಸ್ಕ್ ಗಳನ್ನು ವಿತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News