133 ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಿದ ಧಾರವಾಡ ಜಿಲ್ಲಾಡಳಿತ

Update: 2020-04-25 18:19 GMT

ಹುಬ್ಬಳ್ಳಿ, ಎ.25: ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳಲು ಆಗದೇ ಧಾರವಾಡ ಹಾಗೂ ಹುಬ್ಬಳ್ಳಿ ನಗರದಲ್ಲಿ ಸಿಲುಕಿಕೊಂಡಿದ್ದ 133 ವಲಸೆ ಕಾರ್ಮಿಕರನ್ನು ಧಾರವಾಡ ಜಿಲ್ಲಾಡಳಿತ ತಮ್ಮ ಸ್ವಂತ ಊರುಗಳಿಗೆ ಕಳುಹಿಸಿಕೊಟ್ಟಿದೆ.

ಲಾಕ್‍ಡೌನ್ ಜಾರಿಯಾದ ಬಳಿಕ ಕೆಎಸ್ಸಾರ್ಟಿಸಿ ಬಸ್‍ಗಳು, ಖಾಸಗಿ ಬಸ್‍ಗಳು ಹಾಗೂ ಇತರೆ ವಾಹನಗಳು ಬೇರೆ ಊರುಗಳಿಗೆ ತೆರಳದಂತೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ, ಧಾರವಾಡ, ಹುಬ್ಬಳ್ಳಿ ನಗರಕ್ಕೆ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ ಇತರೆ ಜಿಲ್ಲೆಗಳಿಂದ ವಲಸೆ ಬಂದಿದ್ದ ಕೂಲಿ ಕಾರ್ಮಿಕರನ್ನು ಧಾರವಾಡ ಜಿಲ್ಲಾಡಳಿತ ವಿವಿಧ ಹಾಸ್ಟೆಲ್‍ಗಳಲ್ಲಿ ಆಶ್ರಯ ನೀಡಿ, ಊಟ, ಬಟ್ಟೆ ಇನ್ನಿತರ ಸೌಕರ್ಯಗಳನ್ನು ಒದಗಿಸಿಕೊಟ್ಟಿತ್ತು.

ರಾಜ್ಯ ಸರಕಾರ ಲಾಕ್‍ಡೌನ್ ಅನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 415 ವಲಸೆ ಕಾರ್ಮಿಕರಲ್ಲಿ 133 ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಊರುಗಳಿಗೆ ಕೆಸ್ಸಾರ್ಟಿಸಿ ಬಸ್, ಸರಕಾರಿ ಮಿನಿ ಬಸ್‍ಗಳಲ್ಲಿ ಕಳುಹಿಸಿಕೊಟ್ಟಿತು. ಉಳಿದ ವಲಸೆ ಕಾರ್ಮಿಕರನ್ನು ಸದ್ಯದಲ್ಲಿಯೇ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಜೋಳನ್ ತಿಳಿಸಿದ್ದಾರೆ.

ಪ್ರತಿ ವಾಹನಕ್ಕೂ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ದೀಪಾ ಜೋಳನ್ ಅವರು, ಈಗಾಗಲೇ ಕಾರ್ಮಿಕರನ್ನು ಕಳುಹಿಸುತ್ತಿರುವ ಬಗ್ಗೆ ಸಂಬಂಧಿಸಿದ ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News