ರಾಷ್ಟ್ರಘಾತುಕ ಸಂಘಟನೆಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಹೇಂದ್ರ ಕುಮಾರ್ !

Update: 2020-04-26 14:47 GMT

ಚಿಕ್ಕಮಗಳೂರು, ಎ.26: ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಸಂಘಪರಿವಾರದಿಂದ ಹೊರ ಬಂದ ಬಳಿಕ ರಾಷ್ಟ್ರಘಾತುಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು ಎಂಬ ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬಜರಂಗದಳದ ಮಾಜಿ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಾಲಿ, ಮಾಜಿ ಸಿಎಂ ಗಳೂ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಹೋರಾಟಗಾರರು, ಚಿಂತಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ. ಈ ಪೈಕಿ ಮಹೇಂದ್ರ ಕುಮಾರ್ ಬಜರಂಗದಳದಲ್ಲಿ ತೊಡಗಿದ್ದ ಅವಧಿಯಲ್ಲಿ ಅವರೊಂದಿಗೆ ಒಡನಾಡಿಯಾಗಿದ್ದ ಹಾಲಿ ಸಚಿವ ಸಿ.ಟಿ.ರವಿ ಅವರು ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ ಕೋರಿ ಎ.25ರಂದು ಬೆಳಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಣ್ಣ ಬರಹವೊಂದನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.

ಸಚಿವ ಸಿ.ಟಿ.ರವಿ ಅವರು ಮಹೆಂದ್ರ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲು ಹಾಕಿರುವ ಫೇಸ್ಬುಕ್‍ ಪೋಸ್ಟ್ ನಲ್ಲಿ ಮಹೇಂದ್ರ ಕುಮಾರ್ ಇತ್ತೀಚೆಗೆ ಕೆಲ ರಾಷ್ಟ್ರಘಾತುಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರೆಂದು ಬರೆದುಕೊಂಡಿದ್ದಾರೆ. 

"ಬಹಳ ವರ್ಷಗಳ ಕಾಲ ನಮ್ಮ ಸಂಘಟನೆಯ ಜವಾಬ್ದಾರಿ ಹೊತ್ತು ಕೆಲಸ ಮಾಡಿ, ಕಳೆದ 10 ವರ್ಷಗಳಿಂದ ಸಂಘಟನೆಯಿಂದ ದೂರ ಹೋಗಿ ಅರಿವಿದ್ದೋ, ಇಲ್ಲದೆಯೋ ಕೆಲ ರಾಷ್ಟ್ರಘಾತುಕ ಸಂಘಟನೆಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಿತ್ರ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ" ಎಂದು ಸಚಿವ ಸಿ.ಟಿ.ರವಿ ಬರೆದುಕೊಂಡಿದ್ದಾರೆ. 

ಸಿ.ಟಿ.ರವಿ ಅವರ ಬರಹಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಸಚಿವ ಸಿ.ಟಿ.ರವಿ ಅವರು ರಾಷ್ಟ್ರಘಾತುಕ ಸಂಘಟನೆಗಳೆಂದು ಬರೆದುಕೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮಹೇಂದ್ರ ಕುಮಾರ್ ಅವರ ಸಾವನ್ನೂ ಸಂಭ್ರಮಿಸುವಂತಹ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಓಟ್ಟಾರೆ ಸಚಿವ ಸಿ.ಟಿ.ರವಿ ಅವರು ಸಂತಾಪ ಸೂಚಿಸುವ ನೆಪದಲ್ಲಿ ಮಹೇಂದ್ರ ಕುಮಾರ್ ಬಜರಂಗದಳ ತೊರೆದ ಬಳಿಕ ರಾಷ್ಟ್ರಘಾತುಕ ಸಂಘಟನೆಗಳೊಂದಿಗಿದ್ದರು ಎನ್ನುವ ಮೂಲಕ ಪ್ರಗತಿಪರ ಸಂಘಟನೆಗಳನ್ನು ದೇಶದ್ರೋಹಿ ಸಂಘಟನೆಗಳೆಂದು ಅವಹೇಳನ ಮಾಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮಹೇಂದ್ರ ಕುಮಾರ್ ಬಜರಂಗದಳ ಸಂಘಟನೆಯಿಂದ ಹೊರಬಂದ ಬಳಿಕ ಜೆಡಿಎಸ್ ಪಕ್ಷ ಸೇರಿದ್ದರು. ಆ ಬಳಿಕ ಅವರು ಪ್ರಗತಿಪರ ಸಂಘಟನೆಗಳು ಆಯೋಜಿಸುವ ಜನಜಾಗೃತಿ ಕಾರ್ಯಕ್ರಮ, ಜನನುಡಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳಲ್ಲೂ ಅವರು ವೇದಿಕೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಎನ್‌ಆರ್‌ಸಿ, ಸಿಎಎ ವಿರೋಧಿ ಕಾರ್ಯಕ್ರಮಗಳಲ್ಲೂ ಮಹೇಂದ್ರ ಕುಮಾರ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ನಮ್ಮ ಧ್ವನಿ ಎಂಬ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕವೂ ಅವರು ದೇಶದ ಏಕತೆ, ಸೌಹಾರ್ದ, ಕೋಮುವಾದ ಮತ್ತಿತರ ವಿಚಾರಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News