×
Ad

ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ 121 ಮಂದಿ ಮನೆಗೆ: ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

Update: 2020-04-27 00:00 IST

ಬೆಳಗಾವಿ, ಎ.26: ಕೊರೋನ ಸೋಂಕಿತರ ಜತೆ ಪ್ರಾರ್ಥಮಿಕ ಸಂಪರ್ಕ ಹೊಂದಿ ಇನ್‍ಸ್ಟಿಟ್ಯೂಷನಲ್ ಕ್ವಾರಂಟೈನ್‍ನಲ್ಲಿದ್ದ 121 ಮಂದಿಯನ್ನು ಬಿಡುಗಡೆಗೊಳಿಸಿ ಮನೆಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ರವಿವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗಾವಿ ಕ್ವಾರಂಟೈನ್‍ನಲ್ಲಿದ್ದ 87 ಮಂದಿ ಹಾಗೂ ರಾಯಬಾಗದ ತಾಲೂಕಿನಲ್ಲಿದ್ದ 34 ಜನರನ್ನು ಮನೆಗೆ ಕಳುಹಿಸಲಾಗಿದೆ. ಇವರೆಲ್ಲರೂ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ಇವರ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ಮಾದರಿಗಳು ನೆಗೆಟಿವ್ ಬಂದಿದೆ. ಹೀಗಾಗಿ ಇನ್‍ಸ್ಟಿಟ್ಯೂಷನಲ್ ಕ್ವಾರಂಟೈನ್‍ನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಇವರು ಇನ್‍ಸ್ಟಿಟ್ಯೂಷನಲ್ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದರೂ ಅವರವರ ಮನೆಯಲ್ಲಿಯೇ ಮುಂದಿನ ಹದಿನಾಲ್ಕು ದಿನಗಳವರೆಗೆ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ. ಹೀಗೆ ಮನೆಯಲ್ಲಿ ಇರುವವರ ಮೇಲೆ ಸಾಫ್ಟ್‍ವೇರ್ ಹಾಗೂ ಮೊಬೈಲ್‍ಆಪ್ ಮೂಲಕ ನಿಗಾ ವಹಿಸಲಾಗುತ್ತದೆ. ಆರೋಗ್ಯ ತಂಡಗಳು ಕೂಡ ಅವರ ಮನೆಗಳಿಗೆ ಭೇಟಿ ನೀಡುತ್ತಾರೆಂದು ಅವರು ಮಾಹಿತಿ ನೀಡಿದರು.

ಆರೋಗ್ಯ, ಕಂದಾಯ, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಿರತ ಶ್ರಮದ ಫಲವಾಗಿ ಸೋಂಕಿತರ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಗುಣಮುಖರಾಗುತ್ತಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News