×
Ad

ಕಲಬುರಗಿ: ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿದ ಯುವಕ

Update: 2020-04-27 00:12 IST

ಕಲಬುರಗಿ, ಎ.26: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಯುವಕನೋರ್ವ ಪಾದ ಪೂಜೆ ಮಾಡಿ ಗೌರವಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಡೆದಿದೆ.

ಕೊರೋನ ಕುರಿತಾಗಿ ಮಾಹಿತಿ ಪಡೆಯಲು ರವಿವಾರ ಆಶಾ ಕಾರ್ಯಕರ್ತೆ ಚಂದ್ರಭಾಗ ಹಾಗೂ ಇನ್ನಿತರ ಕಾರ್ಯಕರ್ತೆಯರು ಆಳಂದ ತಾಲೂಕಿನ ನಿಂಬರ್ಗಾ ಗ್ರಾಮಕ್ಕೆ ತೆರಳಿದ್ದರು. ಅದೇ ಗ್ರಾಮದ ವಿಜಯಕುಮಾರ್ ಎನ್ನುವವರ ಮನೆಗೂ ಆಶಾ ಕಾರ್ಯಕರ್ತೆಯರು ತೆರಳಿ ಕೊರೋನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಮನೆ ಒಳಗೆ ನಡೆದ ವಿಜಯಕುಮಾರ್ ಅವರು ಒಂದು ಚೆಂಬಿನಲ್ಲಿ ನೀರು ತಂದು ಆಶಾ ಕಾರ್ಯಕರ್ತೆಯೊಬ್ಬರ ಕಾಲಿಗೆ ನೀರು ಹಾಕಿ ತೊಳೆದಿದ್ದಾರೆ. ಯಾಕೆ ಇದನ್ನೆಲ್ಲಾ ಮಾಡುತ್ತಿದ್ದೀರಿ, ನಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ. ಆದರೆ, ವಿಜಯಕುಮಾರ್ ಅವರು 'ಲಾಕ್‍ಡೌನ್ ಸಂದರ್ಭದಲ್ಲೂ ಕುಟುಂಬವನ್ನು ಮರೆತು ಕೊರೋನ ವಿರುದ್ಧ ಹೋರಾಟ ಮಾಡುತ್ತಿದ್ದೀರಿ. ಅದಕ್ಕೆ ನಿಮ್ಮ ಮೇಲಿನ ಅಭಿಮಾನಕ್ಕಾಗಿ ಈ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಂತಹ ಘಟನೆಗಳು ನಡೆದಿದ್ದರಿಂದ ನಮಗೂ ಭಯವಾಗಿತ್ತು. ಆದರೆ, ಆಶಾ ಕಾರ್ಯಕರ್ತೆಯರಿಗೆ ನಿಂಬರ್ಗಾ ಗ್ರಾಮದಲ್ಲಿ ಗೌರವವನ್ನು ಕೊಡುವುದನ್ನು ನೋಡಿದರೆ, ನಮಗೆ ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ಬರುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News