ಬೆಳಗಾವಿ ಠಾಣೆಯಲ್ಲಿ ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ಸರಪಳಿಯಲ್ಲಿ ಬಂಧಿ: ಭಾರೀ ಆಕ್ರೋಶ

Update: 2020-04-27 10:04 GMT

ಬೆಂಗಳೂರು: ಯಾವುದೇ ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಡುತ್ತಿದ್ದ ರಜೆಯ ಮೇಲಿದ್ದ ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ಒಬ್ಬರು ತಮ್ಮನ್ನು ಪ್ರಶ್ನಿಸಿದ ಪೊಲೀಸರನ್ನು ನಿಂದಿಸಿದ್ದಾರೆಂದು ಆರೋಪಿಸಿ ಅವರನ್ನು ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಸರಪಳಿಯಲ್ಲಿ ಬಂಧಿಸಿಟ್ಟ ವೀಡಿಯೋವೊಂದು ಭಾರೀ ವಿವಾದ ಸೃಷ್ಟಿಸಿದೆ.

ಟ್ವಿಟರಿಗರೊಬ್ಬರು ಪೋಸ್ಟ್ ಮಾಡಿದ್ದ ಈ ವೀಡಿಯೋದಲ್ಲಿ ಕಮಾಂಡೋ ಸಚಿನ್ ಸುನಿಲ್ ಸಾವಂತ್ ಸರಪಳಿಯಿಂದ ಬಂಧಿಸಲ್ಪಟ್ಟಿದ್ದು ಕಾಣಿಸುತ್ತದೆ.

ಈ ವಿಚಾರವನ್ನು ರಾಜ್ಯ ಪೊಲೀಸ್ ಮುಖ್ಯಸ್ಥರ ಜತೆ ಚರ್ಚಿಸಲಾಗಿದೆ. ಅವರ ಜಾಮೀನು ಅರ್ಜಿ ನ್ಯಾಯಾಲಯದ ಮುಂದೆ ಮಂಗಳವಾರ ಬರಲಿದೆ. ನಂತರ  ಸೂಕ್ತ ತನಿಖೆ ನಡೆಸಲಾಗುವುದು ಎಂದು ಡಿಐಜಿ ಹಾಗೂ ಸಿಆರ್ ಪಿಎಫ್ ವಕ್ತಾರ ಎಂ  ದಿನಕರನ್ ಹೇಳಿದ್ದಾರೆ.

ಎಪ್ರಿಲ್ 11ರ ತನಕ ರಜೆಯಲ್ಲಿದ್ದ ಸಚಿನ್ ಸುನಿಲ್ ಸಾವಂತ್ ಲಾಕ್ ಡೌನ್ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ತಮ್ಮ ರಜೆಯನ್ನೂ ವಿಸ್ತರಿಸಿದ್ದರು. ಈ ಸಂದರ್ಭ ಅವರು ಎಪ್ರಿಲ್ 23ರಂದು ರಸ್ತೆಯಲ್ಲಿ ಅಡ್ಡಾಡುತ್ತಿದ್ದರೆನ್ನಲಾಗಿದೆ. ನಂತರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದ ಸಂದರ್ಭ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಸರಪಳಿಯಲ್ಲಿ ಬಂಧಿಸಲಾಗಿತ್ತೆನ್ನಲಾಗಿದೆ.

ಅವರಿಗೆ ಲಾಠಿಯಲ್ಲಿ ಹೊಡೆಯಲಾಗಿತ್ತು ಹಾಗು ಕೈಕೋಳ ತೊಡಿಸಲಾಗಿತ್ತು ಎಂದು ಅವರ ಕುಟುಂಬ ಆರೋಪಿಸಿದೆ. ಸಚಿನ್ ಅವರ ಕಮಾಂಡೋ ಘಟಕ 207 ಕೋಬ್ರಾ ನಕ್ಸಲ್ ನಿಗ್ರಹ ಚಟುವಟಿಕೆಗಳಲ್ಲಿ ತೊಡಗಿತ್ತು. ಅವರನ್ನು ಅವರ ತಂಡದಿಂದ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News