ರಾಜ್ಯದಲ್ಲಿ ಸೋಮವಾರ 9 ಮಂದಿಗೆ ಕೊರೋನ ಪಾಸಿಟಿವ್
Update: 2020-04-27 17:49 IST
ಬೆಂಗಳೂರು, ಎ.27: ರಾಜ್ಯದಲ್ಲಿ ಸೋಮವಾರ 9 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆಯಾಗಿದೆ.
ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನ್ ನಲ್ಲಿ ರವಿವಾರ ಸಂಜೆ 5ರಿಂದ ಸೋಮವಾರ ಸಂಜೆ 5 ಗಂಟೆಯೊಳಗಿನ ಕೊರೋನ ಪ್ರಕರಣಗಳ ಬಗ್ಗೆ ತಿಳಿಸಲಾಗಿದೆ.
ಈ ಪೈಕಿ ದಕ್ಷಿಣ ಕನ್ನಡದಲ್ಲಿ ಇಬ್ಬರು, ಬಾಗಲಕೋಟೆಯ ತಾಯಿ-ಮಗಳು, ವಿಜಯಪುರದಲ್ಲಿ ಇಬ್ಬರು, ಮಂಡ್ಯದಲ್ಲಿ ಇಬ್ಬರು ಹಾಗೂ ಬೆಂಗಳೂರು ನಗರದಲ್ಲಿ 13 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ರಾಜ್ಯದಲ್ಲಿ ಕೊರೋನ ಸೋಂಕಿಗೊಳದ ಒಟ್ಟು 512 ಮಂದಿಯ ಪೈಕಿ 193 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಎ.24 ರಂದು ಸೋಂಕು ದೃಢಪಟ್ಟಿದ್ದ ಬೆಂಗಳೂರಿನ 50 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.