ಈಶ್ವರಪ್ಪ ಬಹಿರಂಗ ಚರ್ಚೆಗೆ ಬರಲಿ, ಎದುರಿಸಲು ಸಿದ್ಧ: ಡಿ.ಕೆ.ಶಿವಕುಮಾರ್ ಸವಾಲು

Update: 2020-04-27 14:28 GMT

ಬೆಂಗಳೂರು, ಎ.27: ನರೇಗಾ ಯೋಜನೆ ಹಾಗೂ ಅದರ ವಿಚಾರದಲ್ಲಿ ನಾನು ಏನೆಲ್ಲಾ ಮಾಡಿದ್ದೇನೆ ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಯಾವ ಸಮಯ ನಿಗದಿ ಮಾಡುತ್ತಾರೋ ಆಗ ನಾನು ಎಲ್ಲ ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೋವಿಡ್-19 ಕುರಿತ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಭೆಗೂ ಮುನ್ನ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಸಾಂಕೇತಿಕವಾಗಿ ಸುರಕ್ಷತಾ ಕಿಟ್ ವಿತರಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಶ್ವರಪ್ಪಗೆ ಶಕ್ತಿ ಇದ್ದರೆ, ಮಾಹಿತಿ ಇದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಹೇಳಲಿ. ನಾನು ಈ ಹಿಂದೆ ಅವರು ಮಲಗಿದ್ದಾರೆ ಎಂದು ಹೇಳಿದ್ದರ ಅರ್ಥವನ್ನು ಗ್ರಹಿಸಲು ಅವರಿಗೆ ಸಾಧ್ಯವಾಗಿಲ್ಲ. ಈಶ್ವರಪ್ಪನವರೇ ನರೇಗಾ ವಿಚಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆದೇಶಿಸಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ನರೇಗಾ ಯೋಜನೆಗೆ ಎಷ್ಟು ಶಕ್ತಿ ಇದೆ ಅಂತಾ ಈಶ್ವರಪ್ಪನವರಿಗೆ ಗೊತ್ತಿಲ್ಲ. ಈ ಯೋಜನೆಯನ್ನು ದೇಶದಲ್ಲೆ ಹೆಚ್ಚು ಪರಿಣಾಮಕಾರಿಯಾಗಿ ಕನಕಪುರದಲ್ಲಿ ಬಳಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೆ ನನಗೆ ಪ್ರಶಸ್ತಿ ನೀಡಿದೆ. ಈ ಬಗ್ಗೆ ಈಶ್ವರಪ್ಪನವರಿಗೆ ಗೊತ್ತಿಲ್ಲ ಎಂದು ಶಿವಕುಮಾರ್ ಛೇಡಿಸಿದರು.

ಯುಪಿಎ ಸರಕಾರ ನರೇಗಾ ಮೂಲಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಒಂದು ಕುಟುಂಬ ಹೇಗೆ ಬಳಸಿಕೊಳ್ಳಬಹುದು, ವೈಯಕ್ತಿಕವಾಗಿ ಈ ಯೋಜನೆ ಕುಟುಂಬಗಳಿಗೆ ಹೇಗೆ ಆಸರೆಯಾಗುತ್ತದೆ ಎಂದು ನಾನು ಹಿಂದೆ ಸರಕಾರಕ್ಕೆ ಸಲಹೆ ಕೊಟ್ಟಿದ್ದೆ ಎಂದು ಅವರು ಹೇಳಿದರು.

ಈಶ್ವರಪ್ಪನವರು ಈ ವಿಚಾರವಾಗಿ ಯಾವ ಮಾಧ್ಯಮದಲ್ಲಾದರೂ ಬಹಿರಂಗ ಚರ್ಚೆಗೆ ಬರಲಿ. ಎಲ್ಲ ಮಾಧ್ಯಮಗಳಲ್ಲೂ ಚರ್ಚೆ ಆಗಲಿ. ನಾನು ಅದನ್ನು ಎದುರಿಸಲು ಸಿದ್ಧ. ಅವರಿಗೆ ಯಾವ ಮಾಹಿತಿ ಬೇಕೋ ಕೊಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ವಿರೋಧ ಪಕ್ಷದ ಅಧ್ಯಕ್ಷನಾಗಿ ನನಗೆ ಪ್ರಚಾರ ಪಡೆಯುವ ಅಗತ್ಯ ಇಲ್ಲ. ನಾನು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ನನಗೆ ರಾಜಕಾರಣ ಹೇಗೆ ಮಾಡಬೇಕು ಅಂತಾನೂ ಗೊತ್ತಿದೆ. ಇದು ದೇಶ ಹಾಗೂ ಮಾನವೀಯತೆಯ ವಿಚಾರ. ಒಂದು ಪಕ್ಷದ ಅಧ್ಯಕ್ಷನಾಗಿ ನರೇಗಾ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದೇನೆ ಎಂದು ಅವರು ಹೇಳಿದರು.

ನನ್ನ ಘನತೆ ಕಡಿಮೆಯಾದರೂ ಪರವಾಗಿಲ್ಲ. ನಾನು ಈಶ್ವರಪ್ಪನಿಗೆ ಉತ್ತರ ಕೊಡಲು ಸಿದ್ಧನಿದ್ದೇನೆ. ಸುಮ್ಮನೆ ಮಾತನಾಡಿ ಓಡಿ ಹೋಗುವ ವ್ಯಕ್ತಿ ನಾನಲ್ಲ. ನೀವು ಸಮಯ ನಿಗದಿ ಮಾಡಿ, ನಾನು ಬಂದು ಉತ್ತರ ನೀಡುತ್ತೇನೆ. ನನಗೆ ಈ ವಿಚಾರದಲ್ಲಿನ ಮಾಹಿತಿಗಳು ಬೆರಳ ತುದಿಯಲ್ಲಿವೆ ಎಂದು ಶಿವಕುಮಾರ್ ತಿಳಿಸಿದರು.

ವೈದ್ಯರು ಹೊರತಾಗಿ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಲ್ಲಿ ಯಾರಿಗೆ ಸುರಕ್ಷಾ ಕಿಟ್ ಸಿಕ್ಕಿಲ್ಲವೋ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸುರಕ್ಷಾ ಕಿಟ್ ನೀಡಲು ನಿರ್ಧರಿಸಲಾಗಿದೆ. ಇವತ್ತು ಸುರಕ್ಷತಾ ಸಾಮಗ್ರಿ ನೀಡುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜಾಗ್ರತೆಯಿಂದ ಇರಬೇಕಾಗಿದೆ. ಸ್ವಲ್ಪ ಕಡಿಮೆ ಆಯ್ತು ಅಂತಾ ಲಾಕ್‍ಡೌನ್ ಸಡಿಲ ಮಾಡಿದ್ದಾರೆ ಎಂದು ನಾವು ಯಾಮಾರುವುದು ಬೇಡ. ಸೋಂಕು ಹೆಚ್ಚಾಗುವ ವಾತಾವರಣವಿದೆ. ಹೆಚ್ಚು ಪರೀಕ್ಷೆ ನಡೆದಂತೆ ಸೋಂಕು ಪ್ರಕರಣ ಪತ್ತೆಯಾಗಲಿದೆ ಎಂಬ ಮಾಹಿತಿ ಇದೆ. ಆ ದೃಷ್ಟಿಯಿಂದ ನಾವು ನಮ್ಮ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News