×
Ad

ಆನಂದ್ ತೇಲ್ತುಂಬ್ಡೆ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಆಗ್ರಹ

Update: 2020-04-27 22:16 IST

ಕಲಬುರಗಿ, ಎ.27: ಚಿಂತಕ, ಬರಹಗಾರ ಡಾ.ಆನಂದ್ ತೇಲ್ತುಂಬ್ಡೆ ಸೇರಿದಂತೆ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕಲಬುರಗಿಯ ಬರಹಗಾರರು, ಪ್ರಗತಿಪರ ಸಂಘಟನೆಯ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ್, ರಾಜ್ಯ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರು, ದೇಶದಲ್ಲಿ ಆನಂದ್ ತೇಲ್ತುಂಬ್ಡೆ ಸೇರಿ ಮಾನವ ಹಕ್ಕು ಹೋರಾಟಗಾರರ ಬಂಧನದ ಪ್ರಕ್ರಿಯೆಗಳು ದಿಗ್ಬ್ರಮೆಯನ್ನು ಉಂಟು ಮಾಡಿವೆ ಎಂದು ಅಭಿಪ್ರಾಯಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಡಪಂಥೀಯ ಚಿಂತಕರನ್ನು ತುಳಿಯಲಾಗುತ್ತಿದೆ. ಜಾತಿ ವ್ಯವಸ್ಥೆ ಇರಬೇಕೆಂದು, ಮನುವಾದವೇ ನಮ್ಮ ಪ್ರಜಾಪ್ರಭುತ್ವದ ಸಂವಿಧಾನವಾಗಬೇಕೆಂದು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಎಂದೂ ತಲೆಎತ್ತದಂತೆ ಮಾಡಬೇಕೆಂದು ಬಿಜೆಪಿ, ಆರೆಸ್ಸೆಸ್ ಹಾಗೂ ಸಂಘಪರಿವಾರದ ಸಂಘಟನೆಗಳು ಬಯಸುತ್ತಿವೆ. ಹೀಗಾಗಿ ಈ ಸಂಘಟನೆಗಳ ಒತ್ತಡದ ಮೇರೆಗೆ ಎಡಪಂಥೀಯ, ದಲಿತ ಹಾಗೂ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಡಾ.ಆನಂದ್ ತೇಲ್ತುಂಬ್ಡೆ ಸೇರಿ ಮಾನವ ಹಕ್ಕುಗಳ ಹೋರಾಟಗಾರರ ಬಂಧನಕ್ಕೆ ಅಗತ್ಯವಾದ ಸುಳ್ಳು ಪ್ರಕರಣಗಳನ್ನು ಮತ್ತು ಕಲ್ಪಿತ ಸಂಚುಗಳನ್ನು ರೂಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲಿದ್ದಾರೆ ಎಂಬುದು ಕೂಡ ಇಂತಹ ಕಲ್ಪಿತ ಸಂಚಾಗಿದೆ. ಭೀಮಾ-ಕೋರಂಗಾವ್ ಪ್ರಕರಣ ಇದಕ್ಕೆ ಹೊರತಾಗಿಲ್ಲ. ಮಾವೋವಾದಿ ಸಂಘಟನೆಗೆ ಎಲ್ಲವನ್ನು ತಳುಕು ಹಾಕುತ್ತ ತಮಗೆ ಬೇಕಾದವರನ್ನು ಬಂಧಿಸುವಂತಹ ನಾಟಕವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಡಾ.ಆನಂದ್ ತೇಲ್ತುಂಬ್ಡೆ ಬಹುದೊಡ್ಡ ಬುದ್ಧಿಜೀವಿ, ದಲಿತ ಹೋರಾಟಗಾರ ಮತ್ತು ಪ್ರಜಾಪ್ರಭುತ್ವವಾದಿ, ಡಾ.ಬಿ.ಆರ್.ಅಂಬೇಡ್ಕರ್ ಕುಟುಂಬದ ಅಳಿಯ. ಇವರು ಪ್ರಜಾಪ್ರಭುತ್ವದ ಮೂಲ ತತ್ವಗಳಾದ ಸಹೋದರತೆ, ಸಮಾನತೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇವುಗಳಿಗೆ ಒತ್ತು ಕೊಟ್ಟು ತಮ್ಮ ಚಿಂತನೆಯ ದಿಕ್ಕನ್ನು ಕಂಡುಕೊಂಡವರು. ಇವರ ಚಿಂತನೆ ಜಾತಿ ವ್ಯವಸ್ಥೆಯನ್ನು ಬೆಂಬಲಿಸುವ ಬ್ರಾಹ್ಮಣ್ಯವನ್ನು ವಿರೋಧಿಸುವಂತಹದ್ದಾಗಿದೆ. ಹೀಗಾಗಿ ಬಲಪಂಥೀಯ ಸಂಘಟನೆಗಳ ಒತ್ತಡ ಮತ್ತು ಸಂಚಿನ ಭಾಗವಾಗಿ ಅವರನ್ನು ಬಂಧಿಸಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಆನಂದ್ ತೇಲ್ತುಂಬ್ಡೆ ಸೇರಿದಂತೆ ಮಾನವ ಹಕ್ಕು ಹೋರಾಟಗಾರರ ಬಂಧನ ನ್ಯಾಯಸಮ್ಮತವಲ್ಲ. ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬರು ಇವರ ಬಂಧನವನ್ನು ಒಪ್ಪುವುದಿಲ್ಲ. ಹೀಗಾಗಿ ಹಿಂದುಳಿದವರು, ದಲಿತರ, ಅಲ್ಪಸಂಖ್ಯಾತರು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲ ಪ್ರಗತಿಪರರು ಶಾಂತಿಯುತವಾಗಿ ಬೀದಿಗಿಳಿಯುವ ಮುನ್ನ ಕೇಂದ್ರ ಸರಕಾರ ಕೂಡಲೇ ಆನಂದ್ ತೇಲ್ತುಂಬ್ಡೆ ಸೇರಿ ಎಲ್ಲ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಲಾಗಿದೆ.

ಈ ಪತ್ರಿಕಾ ಹೇಳಿಕೆಗೆ ಪ್ರೊ.ಎಸ್.ಪಿ.ಮೇಲಕೆರಿ, ಡಾ.ಈಶ್ವರಯ್ಯ ಮಠ, ಹಿರಿಯ ಸಾಹಿತಿ ಕಾಶಿನಾಥ್ ಅಂಬಲಗಿ, ಪ್ರೊ.ಎಚ್.ಟಿ.ಪೋತೆ, ಗಂಗಮ್ಮಾ ಬಿರಾದಾರ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸದಸ್ಯೆ ಗೌರಮ್ಮ ಪಾಟೀಲ ಸೇರಿ ವಿವಿಧ ಸಂಘಟನೆಯ ಸದಸ್ಯರು ಮತ್ತು ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News