ನಿಖಿಲ್ ಮದುವೆಗೆ ಇಟ್ಟಿದ್ದ 5.50 ಕೋಟಿ ರೂ. ವೆಚ್ಚದಲ್ಲಿ ಬಡ ಕುಟುಂಬಗಳಿಗೆ ದಿನಸಿ: ಕುಮಾರಸ್ವಾಮಿ
ಬೆಂಗಳೂರು, ಎ. 28: ಪುತ್ರ ನಿಖಿಲ್ ಮದುವೆ ವೆಚ್ಚಕ್ಕಾಗಿ ಇಟ್ಟಿದ್ದ 5.50 ಕೋಟಿ ರೂ.ವೆಚ್ಚದಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ 1.20 ಲಕ್ಷ ಬಡ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳನ್ನು ನೀಡುವ ಕಾರ್ಯಕ್ರಮಕ್ಕೆ ನಿಖಿಲ್ ಮತ್ತು ರೇವತಿ ದಂಪತಿಯಿಂದಲೇ ಚಾಲನೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಗಿರುವ ಲಾಕ್‍ಡೌನ್‍ನಿಂದ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಡವರಿಗೆ ಅಕ್ಕಿ, ಬೇಳೆ, ಸಕ್ಕರೆ, ಈರುಳ್ಳಿಯನ್ನು ನೀಡಲಾಗುವುದು. ನಮ್ಮ ಪಕ್ಷದಿಂದ ಎರಡೂ ಕ್ಷೇತ್ರದಲ್ಲಿ ಕೂಪನ್ ವಿತರಣೆ ಮಾಡಲಿದ್ದಾರೆಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ವರದಿ ನೆಗೆಟಿವ್ ಬಂದಿರುವುದು ಸಂತೋಷದ ಸುದ್ದಿ. ಆದರೆ, ಇಷ್ಟಕ್ಕೆ ಜನತೆ ಮೈ ಮರೆಯಬಾರದು. ನೆಗೆಟಿವ್ ಬಂದರೂ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಇನ್ನೂ ಎರಡು ವಾರಗಳ ಕಾಲ ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕು. ಯಾವುದೇ ರೀತಿಯಲ್ಲಿಯೂ ನಿರ್ಲಕ್ಷ್ಯ ಮಾಡಬಾರದು. ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ಕೋರಿದರು.
ದೊಡ್ಡವರಿಗೆ ಅನುಕೂಲ: 50 ಸಾವಿರ ಕೋಟಿ ರೂ. ಮ್ಯೂಚುಯಲ್ ಫಂಡ್ ಹಣ ಘೋಷಣೆ ಮಾಡಿದ್ದಾರೆ. ಇದು ದೊಡ್ಡ ಮಾಲಕರಿಗೆ ಅನುಕೂಲವಾಗಲಿದೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಸಂಕಷ್ಟದಲ್ಲಿರುವ ಲಕ್ಷಾಂತರ ಕುಟುಂಬಗಳಿಗೆ ಸರಕಾರ ಶಕ್ತಿ ತುಂಬಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಸಣ್ಣ ಕೈಗಾರಿಕೆಗಳ ಬಗ್ಗೆ ಸರಕಾರ ಗಮನಹರಿಸಿಲ್ಲ. ಕೂಲಿ ಕಾರ್ಮಿಕರು, ರೈತರ ಕೃಷಿ ಉತ್ಪನ್ನಗಳ ಬಗ್ಗೆ ಸರಕಾರ ಸರಿಯಾದ ನಿಲುವು ತೆಗೆದುಕೊಂಡಿಲ್ಲ. ಚಿತ್ರದುರ್ಗದ ಹೆಣ್ಣು ಮಗಳು ಈರುಳ್ಳಿ ಮಾರಾಟ ಮಾಡಲಾಗದೆ ತನ್ನ ಅಳಲು ತೋಡಿಕೊಂಡಿದ್ದಾರೆ. ಸಿಎಂ ಅವರ ನೋವಿಗೆ ಸ್ಪಂದಿಸಲು ಸೂಚಿಸಿದ್ದಾರೆ. ಇದು ಒಬ್ಬ ಮಹಿಳೆ ಸಮಸ್ಯೆಯಲ್ಲ, ಇಡೀ ಕೃಷಿಕರ ಸಮಸ್ಯೆ ಎಂದು ಗಮನ ಸೆಳೆದರು.
ರೈತರ ಕೃಷಿ ಉತ್ಪನ್ನಗಳ ನಾಶಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು 450 ಕೋಟಿ ರೂ.ಪರಿಹಾರ ನೀಡಬೇಕೆಂದು ವರದಿ ನೀಡಿದ್ದು, ರಾಜ್ಯ ಸರಕಾರ ಕೂಡಲೇ ಅದನ್ನು ಜಾರಿ ಮಾಡುವ ಮೂಲಕ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತು ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ದಂಪತಿ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.