ವೈದ್ಯರು, ನರ್ಸ್‍ಗಳಿಗೆ ಸುರಕ್ಷತಾ ಸಾಧನ ಒದಗಿಸಲು ಒತ್ತಾಯಿಸಿ ಎಐಎಂಎಸ್‍ಎಸ್ ನಿಂದ ಆನ್‍ಲೈನ್ ಅಭಿಯಾನ
ಬೆಂಗಳೂರು, ಎ. 28: ದುಡಿಮೆ ಅವಧಿಯನ್ನು 8ರಿಂದ 10 ಗಂಟೆಗೆ ಏರಿಸುವ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕು. ಕೊರೋನ ವೈರಸ್ ಸೋಂಕು ತಡೆಗಟ್ಟಲು ಶ್ರಮಿಸುತ್ತಿರುವ ಎಲ್ಲ ವೈದ್ಯರು, ನರ್ಸ್‍ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಸಾಧನ(ಪಿಪಿಇ)ಗಳನ್ನು ಒದಗಿಸಲು ಆಗ್ರಹಿಸಿ ಎಐಎಂಎಸ್‍ಎಸ್ ವತಿಯಿಂದ ಆನ್‍ಲೈನ್ ಅಭಿಯಾನ ನಡೆಸಲಾಯಿತು.
ಮಂಗಳವಾರ ಬೆಳಗ್ಗೆ 11ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ವರೆಗೆ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ಎಐಎಂಎಸ್‍ಎಸ್‍ನ ನೂರಾರು ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಕೂಲಿ ಕಾರ್ಮಿಕರು ಪಾಲ್ಗೊಂಡು, ಭಿತ್ತಿಪತ್ರಗಳನ್ನು ಪ್ರದರ್ಶನ ನಡೆಸುವ ಮೂಲಕ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಮತ್ತು ವಸತಿ ಖಾತ್ರಿಪಡಿಸಬೇಕು. ಅಲ್ಲದೆ, ಈ ಕಾರ್ಮಿಕರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಅಶ್ಲೀಲ ಮತ್ತು ಪೋರ್ನ್ ವೆಬ್‍ಸೈಟ್‍ಗಳನ್ನು ನಿಷೇಧಿಸಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು. ಮದ್ಯ ಹಾಗೂ ಮಾದಕ ವಸ್ತುಗಳನ್ನು ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿ ಕೈಗೊಂಡಿದ್ದ ಆನ್‍ಲೈನ್ ಅಭಿಮಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಬೆಂಬಲಿಸಿ ಈ ಆಂದೋಲನದಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.