ವರ್ಗಾವಣೆ ಆದೇಶ ರದ್ದು: ಕಲಬುರಗಿ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿರುವ ಬಿ.ಶರತ್
ಕಲಬುರಗಿ, ಎ.28: ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿ, ಬಳಿಕ ಕೆಲವೇ ಗಂಟೆಗಳಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೇ ಇಂದು ಸಂಜೆ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ವರ್ಗಾವಣೆ ಆದೇಶವನ್ನು ತಡೆ ಹಿಡಿಯಲಾಗಿದೆ.
ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಆ ಸ್ಥಾನದಲ್ಲಿದ್ದ ವಿಕಾಸ್ ಕಿಶೋರ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ ಈ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗಿದ್ದು, ಶರತ್ ಅವರನ್ನು ಜಿಲ್ಲಾಧಿಕಾರಿ ಸ್ಥಾನದಲ್ಲಿ ಮುಂದುವರಿಯಲು ಸೂಚಿಸಲಾಗಿದೆ.
ಆ ಬಳಿಕ ಸಿಎಂ ಯಡಿಯೂರಪ್ಪ ಅವರು ಶರತ್ ಜೊತೆ ದೂರವಾಣಿ ಮೂಲಕ ಮಾತನಾಡಿ, ಅವರ ಕಾರ್ಯವೈಖರಿಯನ್ನು ಪ್ರಶಂಸಿದರು. ಜೊತೆಗೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ, ಮುಂದುವರಿಸಿ, ಸದ್ಯ ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.