×
Ad

ಅಸಂಘಟಿತ ಕಾರ್ಮಿಕರ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯ ಖಂಡನೀಯ: ಡಿ.ಕೆ.ಶಿವಕುಮಾರ್

Update: 2020-04-28 22:36 IST

ಬೆಂಗಳೂರು, ಎ.28: ಲಾಕ್‍ಡೌನ್ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಅಸಂಘಟಿತ ಕಾರ್ಮಿಕ ವಲಯದ ವಿಚಾರವಾಗಿ ಈವರೆಗೂ ಒಂದೆ ಒಂದು ಮಾತನ್ನೂ ಆಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹನ ಚಾಲಕರು, ಕ್ಷೌರಿಕರು, ಬಟ್ಟೆ ಹೊಲಿಯುವವರು, ಆಟೋ ಚಾಲಕರು, ಹೊಟೇಲ್ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ವೃತ್ತಿಪರ ಕಾರ್ಮಿಕರಿಗೆ ಆದಾಯ ಇಲ್ಲದಂತಾಗಿದೆ. ಹೀಗಾಗಿ ಅವರಿಗೆ ತಿಂಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಎಲ್ಲ ವಿಮಾ ಕಂಪೆನಿಗಳು ಈ ವರ್ಗದ ಜನರು ಕಟ್ಟಬೇಕಿರುವ ವಾಹನ ಸೇರಿದಂತೆ ಇತರೆ ವಿಮಾ ಕಂತುಗಳನ್ನು ಕೆಲವು ತಿಂಗಳ ಕಾಲ ಮುಂದೂಡಬೇಕು. ಕಳೆದ ಒಂದು ತಿಂಗಳಿನಿಂದ ಚಾಲಕರು ತಮ್ಮ ಆಟೋ, ಟ್ಯಾಕ್ಸಿ ಓಡಿಸಿಲ್ಲ. ಇತರೆ ವೃತ್ತಿಪರ ನೌಕರರು ತಮ್ಮ ಅಂಗಡಿ ಮುಂಗಟ್ಟು ತೆರೆದಿಲ್ಲ. ಹೀಗಾಗಿ ಈ ವರ್ಗದ ಕಾರ್ಮಿಕರಿಗೆ ತಮ್ಮ ಸಂಪಾದನೆ ಇಲ್ಲದಂತಾಗಿದೆ. ಇದರಲ್ಲಿ ಅವರ ತಪ್ಪೇನೂ ಇಲ್ಲ. ಸರಕಾರದ ಆದೇಶವನ್ನು ಪಾಲಿಸಿದ್ದಾರೆ ಎಂದು ಅವರು ಹೇಳಿದರು.

ಹೀಗಾಗಿ ವಾಹನ ಸೇರಿದಂತೆ ಈ ಅಸಂಘಟಿತ ಕಾರ್ಮಿಕರು ಅವಲಂಬಿತವಾಗಿರುವ ವಾಹನ ಯಂತ್ರೋಪಕರಣ, ಆಸ್ತಿಗಳ ಮೇಲಿನ ತೆರಿಗೆಗೆ ವಿನಾಯಿತಿ ನೀಡಬೇಕು. ಮುಂದಿನ 3-6 ತಿಂಗಳ ಕಾಲ ಇವುಗಳನ್ನು ಮನ್ನಾ ಮಾಡಬೇಕು. ಮನ್ನಾ ಮಾಡಲು ಸಾಧ್ಯವಾಗದಿದ್ದರೂ ಇವುಗಳ ಕಂತನ್ನು ಕಟ್ಟಲು ವಿನಾಯಿತಿ ನೀಡಿ ಮುಂದೂಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ಈ ವರ್ಗದ ಜನರಿಗೆ ಕಿರುಕುಳ ನೀಡುತ್ತಿವೆ. ಈ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್‍ನಿಂದಾಗಲಿ ಅಥವಾ ಕೇಂದ್ರ ಸರಕಾರದಿಂದಾಗಲಿ ಯಾವುದೇ ರೀತಿಯ ನಿರ್ದೇಶನಗಳು ಬ್ಯಾಂಕುಗಳಿಗೆ ರವಾನೆಯಾಗಿಲ್ಲ. ಕಾನೂನಿನ ವ್ಯಾಪ್ತಿಯಲ್ಲೇ ಈ ವರ್ಗದ ಜನರಿಗೆ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಬ್ಯಾಂಕುಗಳು, ಸಾಲಗಾರರ ಕಿರುಕುಳ ತಾಳಲಾರದೆ ಬಡ ಜನರು ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ. ಈ ವರ್ಗದ ಜನರು ಸಮಾಜಕ್ಕೆ ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಸರಕಾರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ವರ್ಗದ ಜನರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಶಿವಕುಮಾರ್ ಹೇಳಿದರು.

ಈ ವಿಚಾರವಾಗಿ ನಾವು ಈಗಾಗಲೇ ರಾಜ್ಯ ಸರಕಾರಕ್ಕೆ ನಮ್ಮ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಮ್ಮ ಸಲಹೆ, ಬೇಡಿಕೆಗಳನ್ನು ನೀಡಲಾಗಿದೆ. ಆದರೆ, ಈವರೆಗೂ ಸರಕಾರದಿಂದ ಯಾವುದೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News