ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದ ಕೊರೋನ: ಸಾವಿನ ಸಂಖ್ಯೆ 21ಕ್ಕೆ ಏರಿಕೆ
ತುಮಕೂರು, ಎ. 29: ಅಸ್ತಮ ಮತ್ತು ಉಸಿರಾಟದ ತೊಂದರೆಯಿಂದ ಎ.26ರಂದು ಮೃತಪಟ್ಟಿದ್ದ 73 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
"ತುಮಕೂರು ಜಿಲ್ಲೆಯಲ್ಲಿ ನಾಲ್ಕನೇ ಕೋವಿಡ್-19 ಪ್ರಕರಣ ದೃಡಪಟ್ಟಿದೆ. ನಗರದ ಕೆ.ಹೆಚ್.ಬಿ. ಕಾಲೋನಿಯ ವ್ಯಕ್ತಿಯೊಬ್ಬರು ಎ.25 ರಂದು ಅಸ್ತಮ ಮತ್ತು ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಎ.26ರಂದು ಮೃತಪಟ್ಟಿದ್ದರು. ಇವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ತಗಲಿರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಎಪ್ರಿಲ್ 25 ರಂದು ಆಸ್ಪತ್ರೆಗೆ ಬಂದಾಗ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಎಪ್ರಿಲ್ 28ರ ರಾತ್ರಿ ಜಿಲ್ಲಾಡಳಿತಕ್ಕೆ ದೊರಕಿದೆ. ಅಲ್ಲದೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದ ವ್ಯಕ್ತಿಯಾದ ಕಾರಣ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ, ಎರಡೆರಡು ಬಾರಿ ದೃಢಪಡಿಸಿಕೊಂಡ ನಂತರ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ಅಲ್ಲದೆ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿದ್ದು, ಅವರು ವಾಸಿಸುತ್ತಿದ್ದ ಕೆ.ಹೆಚ್.ಬಿ ಕಾಲೋನಿಯ 100 ಮೀಟರನ್ನು ಸೀಲ್‍ಡೌನ್ ಮಾಡಿ, ಕಂಟೈನ್ಮೆಟ್ ಝೋನ್ ನಿರ್ಮಿಸಲಾಗಿದೆ. ಜನರಿಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ನೀಡಲು ಸಕಲ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದ ವ್ಯಕ್ತಿಯಲ್ಲಿ ಕೋರೋನ ರೋಗದ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜನರು ಎಚ್ಚರದಿಂದ ಇರಬೇಕು. ಅನಾವಶ್ಯಕವಾಗಿ ಓಡಾಡದೆ ಮನೆಯಲ್ಲಿಯೇ ಇರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.