ಕೊರೋನ ವಿರುದ್ಧದ ಹೋರಾಟ: 86.25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರಕಾರ

Update: 2020-04-29 14:25 GMT

ಬೆಂಗಳೂರು, ಎ. 29: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಳಗಾವಿ, ಕಲಬುರಗಿ ಸೇರಿದಂತೆ 26 ಜಿಲ್ಲೆಗಳಿಗೆ ಒಟ್ಟು 86.25 ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಕಂದಾಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಕೊರೋನ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೇಂದ್ರೀಯ ಗೃಹ ಮಂತ್ರಾಲಯವು ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಜ್ಯ ಸರಕಾರ ಕ್ರೋಡೀಕೃತ ಹಾಗೂ ಪರಿಷ್ಕೃತ ಮಾರ್ಗಸೂಚಿ ಅನ್ವಯ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಬಿಡುಗಡೆಯಾದ ಮೊತ್ತವನ್ನು ಕೋವಿಡ್-19 ರೋಗಾಣು ತಡೆಗಟ್ಟಲು ಹೊರಡಿಸಿರುವ ಮಾರ್ಗಸೂಚಿಯಂತೆ ವೆಚ್ಚ ಮಾಡಬೇಕೆಂದು ಸೂಚಿಸಲಾಗಿದೆ.

ಕೂಲಿ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಆಹಾರ, ಸೋಂಕು ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ, ಪರೀಕ್ಷಾ ಕೇಂದ್ರಗಳಿಗೆ ಬಳಸುವ ಸಲಕರಣೆಗಳ ಖರೀದಿಗೆ ಮಾತ್ರವೇ ಬಳಕೆ ಮಾಡಬೇಕು. ಈ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ವೆಚ್ಚ ಮಾಡಿದ್ದಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಎಂದು ನಿರ್ದೇಶನ ನೀಡಲಾಗಿದೆ.

ಒಂದು ವೇಳೆ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿದರೆ ಅಥವಾ ಯಾವುದೇ ಲೋಪ ಕಂಡುಬಂದರೆ ಆಯಾ ಜಿಲ್ಲಾಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಕೆ.ಉಮಾಪತಿ ಹೊರಡಿಸಿರುವ ಆದೇಶದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News