ಮರಳು ಸಾಗಾಟ ತಡೆಯಲು ಹೋದ ತಹಶೀಲ್ದಾರ್ ಮೇಲೆ ಟ್ರ್ಯಾಕ್ಟರ್ ಹರಿಸಿದ ಚಾಲಕ: ಆರೋಪ
Update: 2020-04-29 23:07 IST
ಬೆಳಗಾವಿ, ಎ.29: ಅಕ್ರಮ ಮರಳು ಸಾಗಾಟ ವಾಹನ ತಡೆಯಲು ಹೋದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಮೇಲೆಯೇ ಟ್ರ್ಯಾಕ್ಟರ್ ಹರಿಸಿ ಕೊಲೆ ಪ್ರಯತ್ನ ನಡೆಸಿದ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಳು ಹಜಾರೆ ಎಂಬಾತ ಟ್ರ್ಯಾಕ್ಟರ್ ಹತ್ತಿಸಿ ಹಲ್ಲೆಗೆ ಯತ್ನಿಸಿದ ಆರೋಪಿ ಎಂದು ತಿಳಿದುಬಂದಿದೆ.
ಇಲ್ಲಿನ ಖಿಳೆಗಾಂವ-ಶಿರೂರ ನಡುವಿನ ಹಳ್ಳದಲ್ಲಿ ಮರಳು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ತಹಶೀಲ್ದಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದಾಗ ಈ ಕೃತ್ಯವೆಸಗಿದ್ದು, ಘಟನೆಯಲ್ಲಿ ತಹಶೀಲ್ದಾರ್ ವಾಹನ ಚಾಲಕ ಅನಿಲ್ ಗಸ್ತಿ ಎಂಬವರು ಸಹ ತೀವ್ರವಾಗಿ ಗಾಯಗೊಂಡಿರುವುದಾಗಿ ಮಾಹಿತಿ ದೊರೆತಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.