ಮೈಸೂರಿನಲ್ಲಿ ಕೊರೋನ ಸೋಂಕಿತ ಏಳು ಮಂದಿ ಗುಣಮುಖ
ಮೈಸೂರು,ಎ.29: ಮೈಸೂರಿನಲ್ಲಿ ಏಳು ಮಂದಿ ಕೊರೋನ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಬ್ಬರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 90 ಮಂದಿಗೆ ಕೊರೋನ ಸೋಂಕು ತಗುಲಿದ್ದು, ಅದರಲ್ಲಿ 58 ಮಂದಿ ಗುಣಮುಖ ಹೊಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 32 ಕೊರೋನ ಸೋಂಕಿತರಿಗೆ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೂಲೇಷನ್‍ನಲ್ಲಿ ಚಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯರ ಸೇವೆ ಶ್ಲಾಘನೀಯ: ಇದಕ್ಕೂ ಮೊದಲು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕೊರೋನ ಸೋಂಕಿತರು ಗುಣಮುಖರಾಗಲು ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳ ಸೇವೆ ಶ್ಲಾಘನೀಯ ಎಂದು ಹೇಳಿದರು.
ಮೈಸೂರು ನಗರದ ಕೊರೋನ ಸೋಂಕಿತ ಪಿ.273 ಸುಮಾರು 72 ವರ್ಷದ ವಯೋವೃದ್ಧರು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅವರಿಗೆ ಇತರೆ ಬೇರೆ ಕಾಯಿಲೆಗಳು ಇದ್ದು ಅವರಿಗೆ ಐಸಿಯು ನಲ್ಲಿಟ್ಟು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು, ವೆಂಟಿಲೇಟರ್ ನಲ್ಲಿ ಹೆಚ್ಚು ಚಿಕಿತ್ಸೆ ನೀಡುವುದು ಅಪಾಯ ಎಂದು ವೈದ್ಯರ ಸೂಚನೆ ಮೇರೆಗೆ ಬೆಂಗಳೂರಿನ ಹಿರಿಯ ವೈದ್ಯರ ವೀಡಿಯೋ ಕಾನ್ಫರೆನ್ಸ್ ಮೂಲಕ ಅಗತ್ಯ ಸಲಹೆಗಳನ್ನು ಪಡೆದು ಮಾಸ್ಕ್ ಮೂಲಕ ಆಕ್ಸಿಜನ್ ನೀಡುವ ವಿಧಾನದಲ್ಲಿ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ಅವರು ಕೊರೋನ ದಿಂದ ಗುಣಮುಖರಾಗಿದ್ದಾರೆ. ಅವರಿಗೆ ಬೇರೆ ಕಾಯಿಲೆಗಳು ಇರುವ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ನಮ್ಮ ವೈದ್ಯರೆ ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರಿಗೆ ಯಾವ ರೋಗಿಯೂ ಇಲ್ಲದ ಕಡೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.