ಸಿಗರೇಟಿನಿಂದ ಸೋಂಕು ಹರಡುವ ಅಪಾಯವಿದೆ, ಸರಕಾರ ಸಿಗರೇಟ್ ನಿಷೇಧಿಸಬೇಕು

Update: 2020-04-30 12:00 GMT
ಸಚಿನ್ ಮೀಗಾ

ಬೆಂಗಳೂರು, ಎ.30: ಕೊರೋನ ಸೋಂಕಿತರು ಸೇದಿ ಬಿಸಾಡುವ ಸಿಗರೇಟಿನ ತುಂಡಿನಲ್ಲೂ ಸೋಂಕು ಹರಡುವ ಅಪಾಯವಿದ್ದು, ಕೂಡಲೇ ಸರಕಾರ ಸಿಗರೇಟನ್ನು ನಿಷೇಧಿಸಬೇಕೆಂದು ಕೆಪಿಸಿಸಿ ಕಿಸಾನ್ ಸಂಘದ ಅಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಸಿಗರೇಟನ್ನು ಬಾಯಲ್ಲಿ ಇಟ್ಟು ಸೇದುವುದರಿಂದ ಅದಕ್ಕೆ ಎಂಜಲು ಅಂಟಿರುತ್ತದೆ. ಸೋಂಕಿತರು ಸಿಗರೇಟ್ ಸೇದಿ ಅದರ ಉಳಿದ ಭಾಗವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಕೂಡಲೇ ಜನರು ಸೇದಿ ಬಿಸಾಡುವ ಸಿಗರೇಟಿನ ಮಾದರಿಯನ್ನು ಸಿಎಫ್‍ಟಿಆರ್‍ಐ ಲ್ಯಾಬ್‍ಗೆ ಕಳಿಸಿ ವರದಿಯನ್ನು ತರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಿಗರೇಟ್ ಕಂಪನಿಗಳ ಲಾಬಿ: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಸರಕಾರ ಮದ್ಯ, ತಂಬಾಕು ಮತ್ತು ಗುಟ್ಕಾ ಮಾರಾಟವನ್ನು ನಿಷೇಧಿಸಿದೆ. ಆದರೆ, ಸಿಗರೇಟನ್ನು ಮಾತ್ರ ಬಂದ್ ಮಾಡಿಲ್ಲ. ಈ ನಿಷೇಧದ ಹಿಂದೆ ಸಿಗರೇಟ್ ಕಂಪೆನಿಗಳ ಹತ್ತಾರು ವರ್ಷಗಳ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ.

ತಂಬಾಕು, ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ಬಿಂಬಿಸಲು ಅಂತರಾರಾಷ್ಟ್ರೀಯ ಮಟ್ಟದಲ್ಲಿ ಸಿಗರೇಟ್ ಕಂಪೆನಿಗಳು ಸರಕಾರಗಳ ಮೇಲೆ ಒತ್ತಡ ತರಲು ತೆರೆಮರೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಇದರಿಂದ ಸಿಗರೇಟ್ ಕಂಪನಿಗಳಿಗೆ ಕೋಟ್ಯಂತರ ರೂ. ಲಾಭವಾಗಬಹುದು. ಆದರೆ, ಸಿಗರೇಟ್ ಕಂಪೆನಿಗಳ ಈ ಸ್ವಾರ್ಥದಿಂದ ಅಡಿಕೆ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News