×
Ad

ನಾಲ್ವರು ಸಚಿವರಿಗೆ ಕ್ವಾರಂಟೈನ್: ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಚಿವರಿಗೆ ಬಿಎಸ್‌ವೈ ಸೂಚನೆ

Update: 2020-04-30 18:16 IST

ಬೆಂಗಳೂರು, ಎ. 30: ನಾಲ್ವರು ಸಚಿವರಿಗೆ ಕ್ವಾರಂಟೈನ್‍ಗೆ ಶಿಫಾರಸ್ಸು ಮಾಡಿದ ಬೆನ್ನಲ್ಲೆ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲರೂ ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ, ಈಗಾಗಲೇ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಕ್ಯಾಮರಾಮನ್ ಸಂಪರ್ಕ ಮಾಡಿದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ದಿನಸಿ, ಆಹಾರ ವಿತರಣೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಭೇಟಿಯ ಸಂದರ್ಭದಲ್ಲಿ ಸಚಿವರು ಎಚ್ಚರಿಕೆಯಿಂದ ಇರಬೇಕು. ಕ್ಷೇತ್ರದ ವಿವಿಧೆಡೆ ಪ್ರವಾಸ ಕೈಗೊಳ್ಳುವ ವೇಳೆಯೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ಸಚಿವರಿಗೆ ಯಾರಿಗಾದರೂ ಕೊರೋನ ವೈರಸ್ ಸೋಂಕು ದೃಢಪಟ್ಟರೆ ಮುಂದಿನ ದಿನಗಳಲ್ಲಿ ಕಷ್ಟ ಆಗಲಿದೆ ಎಂದು ಎಚ್ಚರಿಸಿದ್ದಾರೆಂದು ಗೊತ್ತಾಗಿದೆ.

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಒಂದು ತಿಂಗಳಿಂದ ನಾವು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥ ಆಗಲಿದೆ. ಎಲ್ಲ ಸಚಿವರು ಜನರಿಗೆ ಮಾದರಿ ಆಗಿರಬೇಕು. ತಪ್ಪದೆ ಎಲ್ಲರೂ ಮಾಸ್ಕ್ ಧರಿಸಬೇಕು. ಎಲ್ಲೆ ಹೋದರೂ ತಪ್ಪದೆ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ, ಕೇಂದ್ರದ ಮಾರ್ಗಸೂಚಿಗಳನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ನಾನು ಕೋವಿಡ್-19 ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು ಅದು ನೆಗೆಟಿವ್ ಬಂದಿರುತ್ತದೆ, ನಾನು ಆರೋಗ್ಯದಿಂದಿದ್ದು, ಸ್ವತಃ ಕ್ವಾರೆಂಟೈನ್‍ಗೆ ಒಳಗಾಗಿದ್ದೇನೆ.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News