ಕಂಟೈನ್ಮೆಂಟ್ ಝೋನ್ ಅಲ್ಲದ ಕಡೆ ಮೇ 4ರಿಂದ ಕೈಗಾರಿಕೆ, ವಾಣಿಜ್ಯ ಚಟುವಟಿಕೆಗೆ ಅವಕಾಶ: ಬಿಎಸ್‌ವೈ
ಬೆಂಗಳೂರು, ಎ. 30: ರಾಜ್ಯದಲ್ಲಿನ ಕೊರೋನ ವೈರಸ್ ಸೋಂಕು ಪೀಡಿತ 'ಕಂಟೈನ್ಮೆಂಟ್ ಝೋನ್'(ಕೆಂಪು ವಲಯ)ಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಮೇ 4ರ ಬಳಿಕ ಕೈಗಾರಿಕೆಗಳು ಸೇರಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭ ಮಾಡಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಕೊರೋನ ವೈರಸ್ ಸೋಂಕು ಇನ್ನೂ ಎರಡು ಅಥವಾ ಮೂರು ತಿಂಗಳುಗಳ ಕಾಲ ಮುಂದುವರಿದರೂ ಆಶ್ಚರ್ಯಪಡಬೇಕಿಲ್ಲ. ಸೋಂಕು ನಿಯಂತ್ರಣದ ಮಧ್ಯೆ ಆರ್ಥಿಕ ಚಟುವಟಿಕೆಗಳನ್ನು ನಡೆಸಬೇಕೆಂಬುದು ಪ್ರಧಾನಿ ಮೋದಿಯವರ ಅಪೇಕ್ಷೆಯಾಗಿದೆ. ಹೀಗಾಗಿ ಕೈಗಾರಿಕಾ ಚಟುವಟಿಕೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಆತಂಕ ಸೃಷ್ಟಿಸುವ ಸುದ್ದಿಗಳಿಗೆ ಆದ್ಯತೆ ನೀಡಬೇಡಿ: ಸಾರ್ವಜನಿಕರಲ್ಲಿ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸುದ್ದಿಗಳನ್ನು ಹೆಚ್ಚೆಚ್ಚು ಬಿತ್ತರ ಮಾಡಬೇಕೇ ಹೊರತು, ಸೋಂಕಿನ ಬಗ್ಗೆ ಅನಗತ್ಯ ಆತಂಕ ಸೃಷ್ಟಿಸುವ ಸುದ್ದಿಗಳಿಗೆ ಆದ್ಯತೆ ನೀಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ಯಡಿಯೂರಪ್ಪ, ಹೊಟೇಲ್‍ಗಳಲ್ಲಿ ಪಾರ್ಸೆಲ್ ಕೊಡಬಹುದು. ಆದರೆ, ಯಾವುದೇ ಹೊಟೇಲ್, ಮಾಲ್‍ಗಳು, ಚಿತ್ರಮಂದಿರಗಳ ಆರಂಭ ಮಾಡುವ ಸಂಬಂಧ ಮೇ 3ರ ಬಳಿಕ ಪ್ರಧಾನಿಯ ಮುಂದಿನ ಸೂಚನೆ ಆಧರಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಸಾರ್ವಜನಿಕರು ಲಾಕ್‍ಡೌನ್ ಪಾಲನೆ ಮಾಡಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡಿದ್ದಾರೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದ ಯಡಿಯೂರಪ್ಪ, ಸೋಂಕು ನಿಯಂತ್ರಣಕ್ಕೆ ವೈದ್ಯರು ಸೇರಿ ಎಲ್ಲರೂ ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದರು.
ಒಂದು ಅವಧಿಗೆ ಅವಕಾಶ: ಕೊರೋನ ಸೋಂಕು ತಡೆಗಟ್ಟಲು ಹೇರಿದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂತರಾಜ್ಯ ಮತ್ತು ಅಂತರ್ ಜಿಲ್ಲೆಗಳಲ್ಲಿ ಸಿಲುಕಿದವರಿಗೆ ಒಂದು ಅವಧಿಗೆ ತಮ್ಮ ಸ್ವಂತ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಅವರದ್ದೇ ಸ್ವಂತ ಖರ್ಚಿನಲ್ಲಿ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದ್ದು, ಕೆಎಸ್ಸಾರ್ಟಿಸಿಯಿಂದ ಒಂದು ಅವಧಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೈಗಾರಿಕೆಗಳ ಆಡಳಿತ ಮಂಡಳಿಯವರ ಸಂಚಾರಕ್ಕೆ ಅವಕಾಶವಿದ್ದು, ಸ್ಥಳೀಯಾಡಳಿತದಿಂದ ನಿಗದಿತ ಅನುಮತಿ ಪಡೆಯಬೇಕು. ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಲಿದ್ದಾರೆ. ಕೂಲಿ ಕಾರ್ಮಿಕರಿದ್ದರೆ ಅವರಿಗೆ ಒಂದು ಬಾರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಯಾವುದೇ ಕಾರಣಕ್ಕೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಕ್ಷೌರದ ಅಂಗಡಿ(ಹೇರ್ ಕಟಿಂಗ್ ಸೆಲೂನ್)ಗಳನ್ನು ಮೇ 3ರ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ತೆರೆಯಲು ಅವಕಾಶವಿಲ್ಲ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಮೇ 3ರ ಬಳಿಕ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಸೆಲೂನ್‍ಗಳನ್ನು ತೆರೆಯಲು ಕ್ರಮ ವಹಿಸಲಾಗುವುದು ಎಂದರು.
ಮೇ 3ರ ಬಳಿಕ ಮದ್ಯ ಮಾರಾಟ
ರಾಜ್ಯದಲ್ಲಿನ ಮದ್ಯ ಪ್ರಿಯರಿಗೆ ಶೀಘ್ರದಲ್ಲೆ ಶುಭ ಸುದ್ದಿ ಸಿಗುವ ಸಾಧ್ಯತೆಗಳಿದ್ದು, ಮೇ 3ರ ಲಾಕ್‍ಡೌನ್ ಅವಧಿ ಮುಕ್ತಾಯಗೊಂಡ ಬಳಿಕ ಮೇ 4ರಿಂದ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮದ್ಯ ಮಾರಾಟ ಆರಂಭಿಸಲು ಸರಕಾರ ತೀರ್ಮಾನ ಮಾಡಲಿದೆ
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ