ಪ್ರಥಮ ಪಿಯು ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟಿಸಿದ ಶಿಕ್ಷಣ ಇಲಾಖೆ

Update: 2020-04-30 15:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.30: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಕಾರಣ ಅವರನ್ನು ಮುಂದಿನ ತರಗತಿಯ ಪಠ್ಯ ವಿಷಯಗಳ ಬಗ್ಗೆ ಗಮನಹರಿಸಲು ಅನುಕೂಲವಾಗುವಂತೆ 2019-20ನೆ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಆದರೆ, ಕಾಲೇಜಿನ ಫಲಿತಾಂಶವನ್ನು ಯಾವುದೆ ಕಾರಣಕ್ಕೂ ಸೂಚನಾ ಫಲಕದಲ್ಲಿ ಪ್ರಕಟಿಸಬಾರದು. ಫಲಿತಾಂಶವನ್ನು ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಗುಂಪು ಗುಂಪಾಗಿ ಬರಬಹುದಾದ ಸಂಭವ ಇರುವುದರಿಂದ, ಮೊಬೈಲ್ ಫೋನ್‍ಗಳ ಮತ್ತು ಇಮೇಲ್‍ಗಳ ಮೂಲಕ ಮಾತ್ರ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಫಲಿತಾಂಶ ತಿಳಿಯಲು ಯಾವುದೇ ಕಾರಣಕ್ಕೂ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ಬರಲು ಅವಕಾಶ ನೀಡಬಾರದೆಂದು ಎಚ್ಚರಿಕೆ ನೀಡಲಾಗಿದೆ(ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿಯೂ ಇದಕ್ಕೆ ಅವಕಾಶವಿಲ್ಲ). ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಕಾಲೇಜು ಹಂತದಲ್ಲಿಯೆ ಪೂರಕ ಪರೀಕ್ಷೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ತಿಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದುದರಿಂದ, ಇನ್ನು ದ್ವಿತೀಯ ಪಿಯು ವಿದ್ಯಾರ್ಥಿಗಳ ದಾಖಲಾತಿಗೆ ಖುದ್ದಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ. ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಪೂರ್ಣ ಶುಲ್ಕ ಪಾವತಿಸುವಂತೆಯೂ ಒತ್ತಾಯಿಸಬಾರದು.

ಪೋಷಕರು ಶುಲ್ಕಗಳನ್ನು ಕಂತಿನ ಮೂಲಕ ನೀಡಲು ಇಚ್ಛಿಸಿದಲ್ಲಿ ಅದಕ್ಕೂ ಅವಕಾಶ ನೀಡಲು ಸೂಚಿಸಿದೆ. ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರಾಗಿರುತ್ತಾರೋ ಅಥವಾ ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೆ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಸರಕಾರಿ ಮತ್ತುತ ಅನುದಾನಿತ ಪದವಿ ಪೂರ್ವ ಕಾಲೇಜುಗಳು ಎಲ್ಲ ಶುಲ್ಕಗಳನ್ನು 2019-20ನೆ ಸಾಲಿನ ಇಲಾಖೆಯ ಶೈಕ್ಷಣಿಕ ಮತ್ತು ದಾಖಲಾತಿ ಮಾರ್ಗ ಸೂಚಿಯಲ್ಲಿ ತಿಳಿಸಿರುವಂತೆ ಪಡೆಯಲು ಸೂಚಿಸಿದ್ದಾರೆ.

ರಾಜ್ಯಾದ್ಯಂತ ಲಾಕ್‍ಡೌನ್ ಇರುವುದರಿಂದ ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2020-21ನೆ ಸಾಲಿಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಯಾವುದೇ ಶುಲ್ಕವನ್ನು ಹೆಚ್ಚಿಸದಿರಲು ಸೂಚಿಸಲಾಗಿದೆ. ಹಾಗೂ ಕಾಲೇಜು ಆಡಳಿತ ಮಂಡಳಿಯವರು ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲು ಇಚ್ಛಿಸಿದಲ್ಲಿ ಸಂಸ್ಥೆಯವರು ಸ್ವತಂತ್ರರಾಗಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಬೋಧನಾ ಶುಲ್ಕವನ್ನು ನಿಗದಿ ಪಡಿಸಿಕೊಳ್ಳಬೇಕು. ಉಳಿದೆಲ್ಲ ಶುಲ್ಕಗಳನ್ನು 2019-20ನೆ ಸಾಲಿನ ಶೈಕ್ಷಣಿಕ ಮತ್ತು ದಾಖಲಾತಿ ಮಾರ್ಗ ಸೂಚಿಯಲ್ಲಿ ತಿಳಿಸಿರುವಂತೆ ಪಡೆಯಬೇಕು. ಇದರಲ್ಲಿ ಯಾವುದೆ ಗೊಂದಲಗಳು ಉಂಟಾಗದಂತೆ, ಈ ಕಾರ್ಯಗಳನ್ನು ನಿರ್ವಹಿಸಲು ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News