ಲಾಕ್‍ಡೌನ್‍ ಸಂಕಷ್ಟ: ವಿಪಕ್ಷಗಳಿಂದ ರೈತರು, ಶ್ರಮಿಕ ವರ್ಗದ ಪರ ಸಂಘಟಿತ ಹೋರಾಟದ ಎಚ್ಚರಿಕೆ

Update: 2020-04-30 17:22 GMT

ಬೆಂಗಳೂರು, ಎ.30: ಲಾಕ್‍ಡೌನ್‍ನಿಂದಾಗಿ ತೊಂದರೆಗೆ ಸಿಲುಕಿರುವ ರೈತರು, ಶ್ರಮಿಕ ವರ್ಗದವರ ಪರ ಸಂಘಟಿತ ಹೋರಾಟ ನಡೆಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕೊರೋನ ವಿಚಾರದಲ್ಲಿ ವಿರೋಧ ಪಕ್ಷಗಳು ಮೊದಲಿನಿಂದಲೂ ಸರಕಾರಕ್ಕೆ ಸಹಕಾರ ನೀಡುತ್ತಾ ಬಂದಿವೆ. ಆದರೂ, ವಿರೋಧ ಪಕ್ಷಗಳು ರೈತರು, ಶ್ರಮಿಕ ವರ್ಗದವರ ಬಗ್ಗೆ ನೀಡುತ್ತಿರುವ ಮನವಿಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಈ ವಿಚಾರದಲ್ಲಿ ನಮ್ಮ ಸಹನೆ ಕೆಣಕಬೇಡಿ ಎಂದು ಸರಕಾರಕ್ಕೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ವಿವರಿಸಿದರು.

ರಾಜ್ಯದಲ್ಲಿ ಕಳೆದ 40 ದಿನಗಳಿಂದ ಲಾಕ್‍ಡೌನ್ ಜಾರಿಯಲ್ಲಿದೆ. ಇದರಿಂದಾಗಿ, ರೈತರು ಭಾರಿ ತೊಂದರೆಗೆ ಒಳಗಾಗಿದ್ದಾರೆ. ಈ ಕುರಿತು ಇಂದಿನ ಸಭೆಯಲ್ಲಿ ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ರೈತರ ಜೊತೆಗೆ ವಿವಿಧ ವಲಯಗಳ ಕಾರ್ಮಿಕರು, ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ವಿವಿಧ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು ಎಂದು ಅವರು ಹೇಳಿದರು.

ಸಭೆಯಲ್ಲಿ ಇಂದು ನಡೆದ ಚರ್ಚೆಯನ್ನು ಆಧರಿಸಿ ಮೊದಲು ಬೇಡಿಕೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಲಾಗುವುದು. ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅದಕ್ಕೂ ಸರಕಾರ ಕಿವಿಗೊಡದಿದ್ದರೆ ವಿರೋಧ ಪಕ್ಷಗಳು ಒಟ್ಟಾಗಿ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಇದು ಚುನಾವಣಾ ರಾಜಕೀಯವಲ್ಲ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರು, ಶ್ರಮಿಕ ವರ್ಗದವರ ನೆರವಿಗೆ ಸರಕಾರ ಧಾವಿಸಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಒಟ್ಟಾಗಿ ಹೋರಾಟ ನಡೆಸಲು ನಾವೆಲ್ಲ ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದರು.

ಸರ್ವಪಕ್ಷ ನಾಯಕರ ಸಭೆ ಕರೆದಾಗ, ಕಾಂಗ್ರೆಸ್ ಪಕ್ಷ ನಿಯೋಗದಲ್ಲಿ ಹೋಗಿ ಭೇಟಿ ಮಾಡಿದಾಗ ಸಲ್ಲಿಸಿದ ಮನವಿಗಳು ಹಾಗೂ ನೀಡಿದ ಸಲಹೆ, ಸೂಚನೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಬಗ್ಗೆ ಆಲೋಚನೆ ಮಾಡಿಲ್ಲ. ಈಗ ವಿರೋಧ ಪಕ್ಷಗಳು ಒಂದಾಗಿ ನೀಡುವ ಮನವಿ ಪತ್ರವನ್ನಾದರೂ ನಿಗದಿತ ಅವಧಿಯೊಳಗೆ ಕಾರ್ಯರೂಪಕ್ಕೆ ತರುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ರಾಜ್ಯದ ಜನತೆಯ ಹಿತದೃಷ್ಟಿಯಿಂದ ಇದುವರೆಗೆ ನಾವು ಸರಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೇವೆ. ಎಲ್ಲಿಯೂ ರಾಜಕೀಯ ಮಾಡಿಲ್ಲ. ಈಗಲೂ ಆ ಉದ್ದೇಶ ಇಲ್ಲ. ಸಂಕಷ್ಟದಲ್ಲಿರುವವರ ನೆರವಿಗೆ ಸರಕಾರ ಕೂಡಲೆ ಧಾವಿಸಬೇಕು ಎಂಬ ಕಾರಣಕ್ಕೆ ಈ ಸಭೆ ಕರೆದು ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಸುಮ್ಮನೆ ಕೂರುವಂತಿಲ್ಲ. ಕೇರಳ ಸರಕಾರ ಕೊರೋನ ನಿಯಂತ್ರಣಕ್ಕೆ 20 ಸಾವಿರ ಕೋಟಿ ರೂ.ವೆಚ್ಚ ಮಾಡಿಲ್ಲವೆ ? ಒಂದು ವೇಳೆ ಹಣಕಾಸು ತೊಂದರೆ ಇದ್ದಲ್ಲಿ ರಾಜ್ಯ ಸರಕಾರ ಕೇಂದ್ರದ ನೆರವು ಕೋರಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News