ಕ್ಷೌರದಂಗಡಿ, ಡೆಂಟಲ್ ಕ್ಲಿನಿಕ್ ತೆರೆಯಲು ಅವಕಾಶ ನೀಡುವಂತೆ ಸಿಎಂಗೆ ಸುರೇಶ್ ಕುಮಾರ್ ಪತ್ರ

Update: 2020-04-30 18:08 GMT

ಬೆಂಗಳೂರು, ಎ.30: ದೇಶದಾದ್ಯಂತ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕ್ಷೌರದಂಗಡಿ ಮತ್ತು ಡೆಂಟಲ್ ಕ್ಲಿನಿಕ್ ತೆರೆಯಲು ಅವಕಾಶ ಮಾಡಿಕೊಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಕೊರೋನ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಕೇವಲ ಅಗತ್ಯ ವಸ್ತುಗಳ ಪೂರೈಕೆ ಬಿಟ್ಟು ಉಳಿದ ಎಲ್ಲ ಉದ್ಯಮ, ಅಂಗಡಿ, ಕೈಗಾರಿಕೆ ಎಲ್ಲವೂ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಜನರು ಕೆಲವು ವಿಷಯಗಳಲ್ಲಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದರಲ್ಲೂ ಕ್ಷೌರದಂಗಡಿ ಬಂದ್ ಆಗಿರುವುದರಿಂದ, ಮನೆಯಲ್ಲಿ ಕೌರ ಮಾಡಿಕೊಳ್ಳುವ ಅಭ್ಯಾಸ ಇಲ್ಲದವರೆಲ್ಲರೂ ಕಾಡು ಮನುಷ್ಯರಂತೆ ಗಡ್ಡ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೌರದಂಗಡಿ ಮತ್ತು ಡೆಂಟಲ್ ಕ್ಲಿನಿಕ್ ತೆರೆಯಲು ಅವಕಾಶ ಮಾಡಿಕೊಡುವಂತೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸೆಲೂನ್ ಅಂಗಡಿ ಮುಚ್ಚಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಸೆಲೂನ್ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಒತ್ತಾಯ ಹೆಚ್ಚಾಗಿದೆ. ಸಮಾಜಕ್ಕೆ ತೀರಾ ಅನಿವಾರ್ಯವಾದ ಎರಡು ಪ್ರಮುಖ ವೃತ್ತಿಗಳಾದ ಕ್ಷೌರಿಕರು ಮತ್ತು ದಂತ ಚಿಕಿತ್ಸಕ ವೃತ್ತಿಗಳಿಗೆ ಸಂಬಂಧಿಸಿದಂತೆ ಚಟುವಟಿಕೆ ಆರಂಭಿಸಲು ಅನುಮತಿ ನೀಡುವ ಕುರಿತು ಆಲೋಚಿಸಬೇಕಿದೆ ಎಂದು ವಿನಂತಿಸಿಕೊಂಡಿದ್ದಾರೆ.

"ಈ ಎರಡು ವೃತ್ತಿಗಳಲ್ಲಿ ಕಾರ್ಯನಿರತವಾಗಿರುವವರು ಸೋಂಕು ಹರಡದಂತೆ ನೋಡಿಕೊಳ್ಳುವ ಮೂಲಕ ಈ ವೃತ್ತಿಗಳ ಪುನರಾಂಭಕ್ಕೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕೆಂಬುದರ ಕುರಿತು ಸುತ್ತೋಲೆ ಹೊರಡಿಸಲು ಸಂಬಂಧಿಸಿದ ಇಲಾಖೆಗೆ ಅಗತ್ಯ ಸೂಚನೆ ನೀಡಬೇಕೆಂದು ಹಾಗೂ ಈ ಮೂಲಕ ಈ ವೃತ್ತಿಗಳನ್ನು ಅವಲಂಬಿಸಿರುವವರು ಸುಗಮ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ'' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News