ಲಾಕ್‍ಡೌನ್: ಕೂಲಿ ಕಾರ್ಮಿಕರಲ್ಲಿ ಸ್ವಂತ ಊರುಗಳಿಗೆ ತೆರಳಲೂ ನಿರಾಸಕ್ತಿ !

Update: 2020-05-01 05:21 GMT

ಬೆಂಗಳೂರು, ಎ.30: ಹೊಟ್ಟೆಪಾಡಿಗಾಗಿ ರಾಜ್ಯದ ವಿವಿಧ ಕಡೆಗಳಿಂದ ರಾಜಧಾನಿ ಕಡೆಗೆ ಬಂದಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರು ತಮ್ಮ ಸ್ವಂತ ಊರುಗಳಿಗೆ ವಾಪಸ್ಸಾಗಲು ಆಸಕ್ತಿ ತೋರುತ್ತಿಲ್ಲ. ಊರಿಗೆ ಹೋದರೂ ಕೂಲಿ ಮಾಡಿಕೊಂಡು ಜೀವನ ನಡೆಸಬೇಕು. ಆದರೆ, ಲಾಕ್‍ಡೌನ್ ಬಳಿಕ ಎಲ್ಲ ಕಡೆಗಳಲ್ಲಿಯೂ ಕೂಲಿ ಕೆಲಸ ಸಿಗುವುದಿಲ್ಲ ಎಂದು ಕೂಲಿಕಾರ್ಮಿಕರು ಸ್ವಂತ ಊರುಗಳ ಕಡೆಗೆ ಹೋಗುತ್ತಿಲ್ಲ.

ಕೊರೋನ ಸೋಂಕು ಹರಡದಂತೆ ಸರಕಾರಗಳು ದೀರ್ಘ ಅವಧಿಯ ಲಾಕ್‍ಡೌನ್ ಘೋಷಿಸಿತ್ತು. ಇದರಿಂದ ಸಾವಿರಾರು ಕೂಲಿ ಕಾರ್ಮಿಕರಿಗೆ ಕಷ್ಟವಾಗಿತ್ತು. ಅನೇಕರು ತಮ್ಮ ಊರುಗಳಿಗೆ ಹೋಗಲು ಪರದಾಡಿದರು. ಇನ್ನೂ ಅನೇಕರು ಕಾಲ್ನಡಿಗೆಯಲ್ಲಿಯೇ ಊರಿಗೆ ತೆರಳಿದರು. ಉತ್ತರ ಕರ್ನಾಟಕದ ಮಹಿಳೆಯೊಬ್ಬರು ನಡೆದೂ ನಡೆದೂ ಪ್ರಾಣ ಬಿಟ್ಟಂತಹ ದೃಶ್ಯಗಳು ಕಣ್ಣ ಮುಂದಿವೆ.

ಇಂತಹ ಸಂದರ್ಭದಲ್ಲಿಯೂ ನಗರದಲ್ಲಿಯೇ ಬಾಕಿ ಉಳಿದುಕೊಂಡಿದ್ದ ಕೂಲಿ ಕಾರ್ಮಿಕರಿಗೆ ಸರಕಾರದಿಂದ ಹಲವು ರೀತಿಯಲ್ಲಿ ನೆರವು ನೀಡಲಾಗಿತ್ತು. ಇದೀಗ ಮೇ 3ರ ಬಳಿಕ ಲಾಕ್‍ಡೌನ್ ಸಡಿಲಿಕೆಯಾಗುವ ಮುನ್ಸೂಚನೆಯನ್ನು ನೀಡಿದ್ದು, ಸರಕಾರ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಲು ಮುಂದಾಗಿದೆ. ಆದರೆ, ಊರುಗಳಿಗೆ ಹೋದ ಬಳಿಕ ಅದೇ ಕಷ್ಟವನ್ನು ಪಡಬೇಕು ಎಂಬ ಕಾರಣದಿಂದ ಕಾರ್ಮಿಕರು ತಮ್ಮ ಊರುಗಳತ್ತ ಹೋಗಲು ನಿರಾಕರಿಸುತ್ತಿದ್ದಾರೆ.

ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ಹಲವು ಪ್ರದೇಶಗಳಿಗೆ ಸೇರಿದ ಕೂಲಿ ಕಾರ್ಮಿಕರಿದ್ದಾರೆ. ಇದರಲ್ಲಿ ಕೆಲವೇ ಕೆಲವು ಕಾರ್ಮಿಕರು ಸ್ವಗ್ರಾಮಗಳಿಗೆ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ, ಲಾಕ್‍ಡೌನ್‍ಗೂ ಮೊದಲೇ ಊರುಗಳಿಗೆ ಹೋಗದೇ ಸಿಲುಕಿಕೊಂಡಿದ್ದ ಬಹುತೇಕ ಕಾರ್ಮಿಕರು ಈಗ ಮತ್ತೆ ಊರುಗಳಿಗೆ ಹೋಗಲು ನಿರಾಕರಿಸುವ ಕುರಿತು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಸುಮಾರು 500ಕ್ಕೂ ಅಧಿಕ ಕೂಲಿ ಕಾರ್ಮಿಕರು ಇದ್ದಾರೆ. ಇವರೆಲ್ಲರು ಉತ್ತರ ಕರ್ನಾಟಕದ ಭಾಗದವರಾಗಿದ್ದಾರೆ. ಇದರಲ್ಲಿ 50ರಿಂದ ಆರವತ್ತು ಜನ ಬಿಟ್ಟರೆ ಉಳಿದವರು ಇಲ್ಲೇ ಇರುವ ಆಸಕ್ತ ತೋರಿದ್ದಾರೆ. ಈಗಾಗಲೇ ಬೆಂಗಳೂರು ನಗರ ಜಿಲ್ಲಾಡಳಿತದ ಸೂಚನೆ ಮೆರೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳು ಸ್ವಗ್ರಾಮಗಳಿಗೆ ಮರಳುವ ಕಾರ್ಮಿಕರ ಪಟ್ಟಿ ಸಿದ್ದಪಡಿಸುತ್ತಿದ್ದು ಬಹುತೇಕ ಇಲ್ಲೇ ಇರುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

ಅನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಹಲವು ಕೈಗಾರಿಕೆಗಳಿವೆ. ಬೊಮ್ಮನಹಳ್ಳಿ ಕೂಡ ಅನೇಕಲ್ ತಾಲೂಕಿನ ಹಲವು ಪ್ರದೇಶಗಳಿಗೆ ಸಮೀಪ ಇರುವ ಹಿನ್ನೆಲೆಯಲ್ಲಿ ಅಲ್ಲಿಯೂ ಕೂಡ ಬಹಳಷ್ಟು ಕೂಲಿಕಾರ್ಮಿಕರು ಉತ್ತರ ಕರ್ನಾಟಕ ಪ್ರದೇಶದವರಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ಅನೇಕಲ್ ತಾಲೂಕಿನ ಹುಸ್ಕೂರು, ಮರಸೂರು, ಹೆನ್ನಾಗರ, ಚೊಕ್ಕನಾಯಕನಹಳ್ಳಿ ಸೇರಿದಂತೆ ಹಲವು ಪ್ರದೇಶದಲ್ಲಿ ಹೊರರಾಜ್ಯಗಳ ಕೂಲಿ ಕಾರ್ಮಿಕರಂತೆ ನಮ್ಮ ರಾಜ್ಯದವರೂ ಕೂಡ ಇದ್ದಾರೆ.

ಗ್ರಾಮಗಳಲ್ಲಿ ಹೊರಗಿನವರ ಬಗ್ಗೆ ನಿಗಾ ಇರಲಿ

ಈಗಾಗಲೇ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಹೊರ ಜಿಲ್ಲೆಗಳ ಕೂಲಿಕಾರ್ಮಿಕರ ಪಟ್ಟಿಯನ್ನು ತೆಗೆದುಕೊಂಡಿದ್ದಾರೆ. ಇದನ್ನು ಜಿಲ್ಲಾವಾರು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಿದ್ದಾರೆ. ಆ ಬಳಿಕವಷ್ಟೇ ಹೊರ ಜಿಲ್ಲೆಯ ಕೂಲಿಕಾರ್ಮಿಕರನ್ನು ಅವರ ಊರಿಗಳಿಗೆ ಬಸ್ ನಲ್ಲಿ ಕಳುಹಿಸಿಕೊಡಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಹೊರ ಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಸಂಬಂಧದ ಪಟ್ಟಿ ತಯಾರಿ ಮಾಡಲಾಗಿದೆ. ಆದರೆ ಹಲವು ಕೂಲಿಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಆಸಕ್ತಿ ತೋರುತ್ತಿಲ್ಲ. ಬಹಳಷ್ಟು ಜನರು ಇಲ್ಲಿಯೇ ಉಳಿಯುವ ಮನಸ್ಸು ಮಾಡಿದ್ದಾರೆ. ಈ ಸಂಬಂಧ ನಾವು ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಲಾಗುತ್ತದೆ.

-ಮಮತಾ, ಪಿಡಿಒ ಆವಲಹಳ್ಳಿ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News