ಭಾರತಕ್ಕೆ ಪಾಕಿಸ್ತಾನ ಮಾದರಿಯಾಗದಿರಲಿ

Update: 2020-05-01 06:15 GMT

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಭಾರತ ಎಂದೂ ಪಾಕಿಸ್ತಾನವನ್ನು ತನ್ನ ಸ್ಪರ್ಧಿಯಾಗಿ ಭಾವಿಸಿರಲೇ ಇಲ್ಲ. ಈ ದೇಶ ಯಾವ ದಿಕ್ಕಿನತ್ತ ಮುನ್ನಡೆಯಬೇಕು ಎನ್ನುವ ಸ್ಪಷ್ಟತೆ ನೆಹರೂ, ಪಟೇಲ್, ಆಝಾದ್‌ರಂತಹ ರಾಜಕೀಯ ಮುತ್ಸದ್ದಿಗಳಿಗಿತ್ತು. ವಿಶ್ವ ಅಮೆರಿಕ ಮತ್ತು ಸೋವಿಯೆಟ್ ರಶ್ಯ ಎನ್ನುವ ಪ್ರಬಲ ಶಕ್ತಿಗಳಾಗಿ ಒಡೆದ ಸಂದರ್ಭದಲ್ಲಿ ಭಾರತ ಯಾರ ಜೊತೆಗೂ ತನ್ನನ್ನು ತಾನು ಗುರುತಿಸಿಕೊಳ್ಳದೆ ತೃತೀಯ ಶಕ್ತಿಯಾಗಿ ಮುನ್ನೆಲೆಗೆ ಬಂತು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಆತುರಾತುರದಿಂದ ಅಮೆರಿಕದ ಮಡಿಲಿಗೆ ಹೋಗಿ ಬಿತ್ತು. ರಶ್ಯದ ಸಮತಾವಾದದೊಂದಿಗೆ ಮೃದು ನಿಲುವನ್ನು ತಳೆದರೂ ಎಂದಿಗೂ ಭಾರತ ರಶ್ಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಂಡಿರಲಿಲ್ಲ. ಇದೇ ಸಂದರ್ಭದಲ್ಲಿ, ಜಿನ್ನಾ ಅವರ ನೇತೃತ್ವದಲ್ಲಿ ‘ಜಾತ್ಯತೀತ ಪಾಕಿಸ್ತಾನ’ ರಚನೆಯಾದರೂ, ಅತಿ ಬೇಗ ಅದು ಧಾರ್ಮಿಕ ಅಸ್ಮಿತೆಯೊಂದಿಗೆ ಗುರುತಿಸಲ್ಪಟ್ಟಿತು. ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿ ಬೆಳೆಯುತ್ತಲೇ ಹೋಯಿತು. ಆ ಮೂಲಕವೇ ವಿಶ್ವದ ಗೌರವಕ್ಕೆ ಪಾತ್ರವಾಯಿತು. ನೆಹರೂ ಅವರ ದೂರದೃಷ್ಟಿಯ ಪರಿಣಾಮವಾಗಿ ಭಾರತ ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಅತಿ ವೇಗವಾಗಿ ಬೆಳೆಯಿತು. ಇಂದು ಭಾರತ ವಿಶ್ವದ ಮುಂದೆ ಸಾರ್ವಭೌಮ ರಾಷ್ಟ್ರವಾಗಿ ತಲೆಯೆತ್ತಿ ನಿಂತಿದ್ದರೆ ಅದಕ್ಕೆ ಮುಖ್ಯ ಕಾರಣ ನೆಹರೂ ಅವರಂತಹ ಜಾತ್ಯತೀತ ನಾಯಕರ ದೂರದೃಷ್ಟಿಯಾಗಿದೆ. ಯಾವುದೇ ಬಂಡವಾಳ ಶಾಹಿ ರಾಷ್ಟ್ರಗಳ ಮುಂದೆ ತಲೆಬಾಗದೆ, ದೇಶವನ್ನು ಯಾವುದೇ ಧಾರ್ಮಿಕ ಮುಖಂಡರ ಕೈಗೆ ಒಪ್ಪಿಸದೆ ಮುಂದೆ ಸಾಗಿದ ಪರಿಣಾಮವಾಗಿ ಭಾರತ ಅತಿ ಕಡಿಮೆ ಅವಧಿಯಲ್ಲಿ ಅಪಾರವಾದುದನ್ನು ಸಾಧಿಸಲು ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ, ಭಾರತದೊಂದಿಗೆ ಪೈಪೋಟಿ ನಡೆಸುವ ಆತುರದಲ್ಲಿ ಅಮೆರಿಕದ ಜೀತಕ್ಕೆ ಬಿದ್ದ ಪಾಕಿಸ್ತಾನದ ಗತಿ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಜಿನ್ನಾ ಅವರು ಎತ್ತಿ ಹಿಡಿದ ಜಾತ್ಯತೀತ ಪಾಕಿಸ್ತಾನದಿಂದ ಹಿಂದೆ ಸರಿದ ಕಾರಣಕ್ಕೂ ಅಲ್ಲಿನ ಜನರು ಸಾಕಷ್ಟು ಬೆಲೆ ತೆತ್ತಿದ್ದಾರೆ. ಭಾರತದ ಮೇಲೆ ಆಕ್ರಮಣ ನಡೆಸಲೆಂದೇ ಸಾಕಿದ ಉಗ್ರಗಾಮಿ ಸಂಘಟನೆಗಳು ಅಂತಿಮವಾಗಿ ಪಾಕಿಸ್ತಾನವನ್ನೇ ಬಲಿ ತೆಗೆದುಕೊಂಡವು. ಅಭಿವೃದ್ಧಿಯಲ್ಲಿ ತೀವ್ರ ಹಿನ್ನಡೆಯನ್ನು ಕಂಡಿತು. ಇಂದು ಪಾಕಿಸ್ತಾನವನ್ನು ಒಂದೆಡೆ ಅಮೆರಿಕ ಜಗ್ಗುತ್ತಿದ್ದರೆ, ಮಗದೊಂದೆಡೆ ಚೀನಾ ಜಗ್ಗುತ್ತಿದೆ. ಈ ಎರಡು ಬಲಿಷ್ಠ ರಾಷ್ಟ್ರಗಳ ಹಗ್ಗಜಗ್ಗಾಟದಲ್ಲಿ ಪಾಕಿಸ್ತಾನ ತನ್ನ ಸಾರ್ವಭೌಮತೆಯನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ಅಮೆರಿಕ ಹೇಳಿದ್ದಕ್ಕೆಲ್ಲ ತಲೆದೂಗಿದ ಪಾಕಿಸ್ತಾನ ಇಂದು, ಅದರ ಸಹವಾಸದಿಂದ ಕಳಚಿಕೊಳ್ಳುವ ದಾರಿಯನ್ನು ಹುಡುಕುತ್ತಿದೆ. ಅಮೆರಿಕ ಎನ್ನುವುದು ಅದರ ಪಾಲಿಗೆ ಹುಲಿ ಸವಾರಿಯಂತಾಗಿದೆ. ಒಂದು ವೇಳೆ ಅದರಿಂದ ಇಳಿದರೆ, ಆ ಹುಲಿಯೇ ಪಾಕಿಸ್ತಾನವನ್ನು ತಿಂದು ಮುಗಿಸುತ್ತದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೇಡವಾಗಿರುವ ಅಮೆರಿಕದ ಸ್ನೇಹಕ್ಕಾಗಿ ಭಾರತ ತುದಿಗಾಲಲ್ಲಿ ನಿಂತಿದೆ. ಟ್ರಂಪ್‌ರನ್ನು ಮೆಚ್ಚಿಸುವುದು, ಖುಷಿ ಪಡಿಸುವುದೇ ಭಾರತದ ವಿದೇಶಾಂಗ ನೀತಿ ಎಂದು ನಂಬಿಕೊಂಡಂತಿದೆ.

ಕಳೆದ ಒಂದು ದಶಕದಿಂದ ಭಾರತ ತನ್ನನ್ನು ತಾನು ಪಾಕಿಸ್ತಾನವಾಗಿ ಪರಿವರ್ತಿಸಲು ಶ್ರಮಿಸುತ್ತಿದೆ. ಭಾರತದೊಳಗಿರುವ ಕೆಲವು ಕೇಸರಿ ಸಂಘಟನೆಗಳು ನೆಹರೂ ಮಾದರಿಯ ಭಾರತದ ಜಾಗದಲ್ಲಿ, ಪಾಕಿಸ್ತಾನ ಮಾದರಿಯ ಭಾರತವೊಂದನ್ನು ಕಟ್ಟುವಲ್ಲಿ ಶ್ರಮಿಸುತ್ತಿವೆ. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿವೆ. ಪಾಕಿಸ್ತಾನದಂತೆಯೇ ಭಾರತವನ್ನೂ ಧರ್ಮಾಧಾರಿತ ದೇಶವಾಗಿ ಬದಲಿಸಲು ಸಂಘಪರಿವಾರ ಬೇರೆ ಬೇರೆ ರೀತಿಯ ಸಂಚುಗಳನ್ನು ರೂಪಿಸುತ್ತಾ ಬಂದಿದೆ. ಒಂದು ಕಾಲದಲ್ಲಿ ಪಾಕಿಸ್ತಾನ ವಿವಿಧ ಉಗ್ರಗಾಮಿ ಸಂಘಟನೆಗಳಿಗಾಗಿ ಕುಖ್ಯಾತವಾಗಿತ್ತು. ಆದರೆ ಇಂದು ಭಾರತದಲ್ಲೂ, ಅಂತಹದೇ ಉಗ್ರವಾದಿ ಸಂಘಟನೆಗಳು ಬೇರಿಳಿಸಿವೆ. ಹಿರಿಯ ಪೊಲೀಸ್ ಅಧಿಕಾರಿ ದಿವಂಗತ ಹೇಮಂತ್ ಕರ್ಕರೆ ತಂಡದ ತನಿಖೆ, ಭಾರತದಲ್ಲೂ ಹಿಂದುತ್ವದ ತಳಹದಿಯಲ್ಲಿ ಉಗ್ರವಾದಿ ಸಂಘಟನೆಗಳು ಬೇರು ಬಿಟ್ಟಿರುವುದನ್ನು ಬಹಿರಂಗಪಡಿಸಿತ್ತು. ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟ, ಸಂಜೋತಾ ಸ್ಫೋಟಗಳಲ್ಲಿ ಈ ಉಗ್ರಗಾಮಿ ಸಂಘಟನೆಗಳ ಕೈವಾಡ ಈಗಾಗಲೇ ಬೆಳಕಿಗೆ ಬಂದಿದೆ. ಕಲಬುರ್ಗಿ, ಗೌರಿಲಂಕೇಶ್, ದಾಭೋಲ್ಕರ್‌ರಂತಹ ಚಿಂತಕರ ಹತ್ಯೆಗಳಲ್ಲೂ ಇವರ ಕೈವಾಡಗಳಿವೆ. ಹೇಗೆ ಪಾಕಿಸ್ತಾನ ಸರಕಾರವನ್ನು ಅಲ್ಲಿನ ಧಾರ್ಮಿಕಸಂಘಟನೆಗಳು ನಿಯಂತ್ರಿಸಲು ಯತ್ನಿಸುತ್ತಿವೆಯೋ, ಭಾರತದಲ್ಲೂ ಪ್ರಜಾಸತ್ತಾತ್ಮಕ ಸರಕಾರ, ಆರೆಸ್ಸೆಸ್‌ನಂತಹ ಸಂಘಟನೆಗಳಿಂದ ನಿಯಂತ್ರಿಸಲ್ಪಡುವ ಸ್ಥಿತಿಗೆ ಬಂದು ನಿಂತಿದೆ. ಈ ಮೂಲಕ ಪಾಕಿಸ್ತಾನ ಅತಿ ಬೇಗದಲ್ಲಿ ಸಾಧಿಸಿದ್ದನ್ನು ಭಾರತ ಸಂಘಪರಿವಾರದ ಮೂಲಕ ತಡವಾಗಿಯಾದರೂ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಮೇಲೆ ಪಾಕಿಸ್ತಾನದಲ್ಲಿ ಯಾವ ರೀತಿಯ ದಾಳಿಗಳು ನಡೆದವೋ, ಅವುಗಳನ್ನು ಮಾದರಿಯಾಗಿರಿಸಿಕೊಂಡು ಭಾರತದಲ್ಲಿ ಅದಕ್ಕಿಂತಲೂ ಭೀಕರವಾದ ದಾಳಿಗಳು ನಡೆದವು. ಗುಜರಾತ್ ನರಮೇಧ, ಮುಂಬೈ ಹಿಂಸಾಚಾರ, ದಿಲ್ಲಿ ಹಿಂಸಾಚಾರಗಳೆಲ್ಲವೂ ಸಂಘಪರಿವಾರ ಸಂಘಟನೆಗಳು ಪಾಕಿಸ್ತಾನವನ್ನು ಮಾದರಿಯಾಗಿಟ್ಟುಕೊಂಡು ಎಸಗಿದ ಕೃತ್ಯಗಳು.

ಇದೆಲ್ಲದರ ಪರಿಣಾಮವಾಗಿ ಭಾರತ ತನ್ನ ಜಾತ್ಯತೀತತೆ, ಧಾರ್ಮಿಕ ಸೌಹಾರ್ದದ ಮೌಲ್ಯಗಳನ್ನು ಕಳಚಿಕೊಂಡು, ವಿಶ್ವದ ಮುಂದೆ ‘ಧಾರ್ಮಿಕ ಅಸಹಿಷ್ಣು’ ದೇಶವಾಗಿ ಗುರುತಿಸಿಕೊಳ್ಳುವ ಹಂತ ತಲುಪಿದೆ. ಯಾವ ಅಮೆರಿಕವನ್ನು ಮೆಚ್ಚಿಸಲು ಭಾರತ ಅವಿರತ ಪ್ರಯತ್ನ ನಡೆಸುತ್ತಿದೆಯೋ, ಅದೇ ಅಮೆರಿಕ ಇಂದು ಭಾರತವನ್ನು ಧಾರ್ಮಿಕ ಅಸಹಿಷ್ಣು ಕಾರಣಗಳಿಗಾಗಿ ‘ಕಪ್ಪು ಪಟ್ಟಿಗೆ’ ಸೇರಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತಾದ ಅಮೆರಿಕದ ಆಯೋಗದ ವಾರ್ಷಿಕ ವರದಿಯಲ್ಲಿ ಭಾರತ ಸಹಿತ 14 ದೇಶಗಳನ್ನು ‘ಆತಂಕ ಉಂಟು ಮಾಡುವ ದೇಶಗಳು’ ಎಂದು ಪರಿಗಣಿಸಬೇಕು ಎಂದು ಅಲ್ಲಿನ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ಜಾತ್ಯತೀತತೆಯನ್ನು ತನ್ನ ಹಿರಿಮೆಯೆಂದು ವಿಶ್ವದ ಮುಂದೆ ಘೋಷಿಸಿಕೊಂಡು ಬಂದ ಭಾರತಕ್ಕೆ ಇದೊಂದು ಭಾರೀ ಮುಖಭಂಗವಾಗಿದೆ. ಯಾಕೆಂದರೆ, ಈಗಾಗಲೇ ಈ ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನ, ಉತ್ತರ ಕೊರಿಯದಂತಹ ದೇಶಗಳು ಸೇರಿಕೊಂಡಿವೆ. ಇದೀಗ ಭಾರತವೂ ಆ ಸಾಲಿಗೆ ಸೇರುವ ಹಾದಿಯಲ್ಲಿದೆ. ಒಂದು ವೇಳೆ ಅದರಲ್ಲಿ ಯಶಸ್ವಿಯಾದದ್ದೇ ಆದರೆ, ಅದರ ಹೆಗ್ಗಳಿಕೆಯನ್ನು ಸಂಪೂರ್ಣ ಆರೆಸ್ಸೆಸ್ ಮತ್ತು ಅದರ ಸಹ ಸಂಘಟನೆಗಳ ತಲೆಗೆ ಕಟ್ಟ ಬೇಕಾಗಬಹುದು. ಈ ದೇಶವನ್ನು ಪಾಕಿಸ್ತಾನವನ್ನಾಗಿಸುವ ಅದರ ಪ್ರಯತ್ನ ಬಹುತೇಕ ಯಶಸ್ವಿಯಾಗಿರುವುದಕ್ಕಾಗಿ ಅವುಗಳನ್ನು ಅಭಿನಂದಿಸಬೇಕಾಗಬಹುದು.

ಅಮೆರಿಕದ ಆಯೋಗದ ವರದಿಯನ್ನು ಭಾರತ ಬಲವಾಗಿ ಖಂಡಿಸಿದೆ. ‘‘ಭಾರತದ ವಿರುದ್ಧ ತಾರತಮ್ಯಕಾರಿ ಹೇಳಿಕೆಗಳು ಹೊಸತೇನಲ್ಲ. ಆದರೆ ಈಗ ಇದು ಹೊಸ ಮಟ್ಟಕ್ಕೇರಿದೆ. ನಾವು ಈ ಆಯೋಗವನ್ನು ಕಳವಳ ಹುಟ್ಟಿಸುವ ಸಂಘಟನೆ ಎಂದು ಪರಿಗಣಿಸುತ್ತೇವೆ’’ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ಭಾರತ ತನ್ನ ಮುಖಕ್ಕೆ ಹಿಡಿದ ಕನ್ನಡಿಯನ್ನೇ ದೂಷಿಸಿ, ತನ್ನನ್ನು ತಾನು ಸಮರ್ಥಿಸಲು ಮುಂದಾಗಿದೆ. ಆದರೆ ಕಳೆದ ಒಂದು ದಶಕದಿಂದ ಭಾರತದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ಕಡೆಗೆ ಕಣ್ಣಾಯಿಸಿದರೆ, ‘ಕಳವಳ ಹುಟ್ಟಿಸುವ ಸಂಘಟನೆ’ ಯಾವುದು ಎನ್ನುವುದು ಸ್ಪಷ್ಟವಾಗಬಹುದು. ಇತ್ತೀಚೆಗೆ ಈ ದೇಶದಲ್ಲಿ ಮೂವರು ಸಾಧುಗಳನ್ನು ಅತ್ಯಂತ ಬರ್ಬರವಾಗಿ ಕೊಂದು ಹಾಕಲಾಯಿತು. ವಿಪರ್ಯಾಸವೆಂದರೆ, ಈ ಘಟನೆಯನ್ನೂ ಒಂದು ನಿರ್ದಿಷ್ಟ ಧರ್ಮದ ತಲೆಗೆ ಕಟ್ಟುವ ಪ್ರಯತ್ನ ಇನ್ನಿಲ್ಲದಂತೆ ನಡೆಯಿತು. ಇದು ‘ಧಾರ್ಮಿಕ ಅಸಹಿಷ್ಣುತೆ’ಯಲ್ಲದೆ ಇನ್ನಾವುದರ ಸಂಕೇತ? ಇಡೀ ವಿಶ್ವ ಕೊರೋನವನ್ನು ಒಂದಾಗಿ ಎದುರಿಸುತ್ತಿರುವಾಗ, ಭಾರತದಲ್ಲಿ ಮಾತ್ರ ಕೊರೋನವನ್ನು ಒಂದು ನಿರ್ದಿಷ್ಟ ಧರ್ಮದ ಜನರ ವಿರುದ್ಧ ದ್ವೇಷವನ್ನು ಬಿತ್ತಲು ಬಳಸಲಾಯಿತು. ಸಿಎಎ, ಎನ್‌ಆರ್‌ಸಿ ಕಾಯ್ದೆಯ ಹಿಂದಿರುವುದು, ಈ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವುದೇ ಆಗಿದೆ. ಅದನ್ನು ವಿರೋಧಿಸಿದ ಜನರ ದಮನಕ್ಕೆ ಸರಕಾರ ಅನುಸರಿಸಿದ ನೀತಿ, ದಿಲ್ಲಿ ಹಿಂಸಾಚಾರ ಇತ್ಯಾದಿಗಳನ್ನು ಭಾರತ ಹೇಗೆ ಸಮರ್ಥಿಸಿಕೊಳ್ಳುತ್ತದೆ? ಒಂದನ್ನು ಗಮನಿಸಬೇಕು. ಪಾಕಿಸ್ತಾನ ತನ್ನ ನೀತಿಗಳಿಂದಾಗಿಯೇ ಬಡತನ, ಅನಾರೋಗ್ಯ, ಅನಕ್ಷರತೆಯ ನಡುವೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದೆ. ಭಾರತ ಪಾಕಿಸ್ತಾನವನ್ನು ಅನುಸರಿಸುವುದೆಂದರೆ, ಭಾರತವನ್ನು ಬಡತನ, ಅನಕ್ಷರತೆ, ಅನಾರೋಗ್ಯದ ಕಡೆಗೆ ಹಿನ್ನಡೆಸುವುದೆಂದೇ ಅರ್ಥ. ಭಾರತದಲ್ಲಿ ಅಸಹಿಷ್ಣುತೆ, ಕೋಮುಗಲಭೆಗಳು, ವಿದ್ವೇಷಗಳು ಹೆಚ್ಚುತ್ತಾ ಹೋದಂತೆಯೇ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಹಿನ್ನಡೆಯಾಗುತ್ತಿದೆ. ಭಾರತಕ್ಕೆ ಎಂದೂ ಪಾಕಿಸ್ತಾನ ಮಾದರಿಯಾಗದಿರಲಿ. ನೆಹರೂ ನೇತೃತ್ವದಲ್ಲಿ ಭಾರತ ವಿಶ್ವದಲ್ಲಿ ತನ್ನದಾಗಿಸಿಕೊಂಡಿದ್ದ ಘನತೆಯನ್ನು ಮತ್ತೆ ಮರಳಿ ಪಡೆಯಲು ಹೊಸದಾಗಿ ಹೋರಾಟವೊಂದನ್ನು ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಆತ್ಮವಿಮರ್ಶೆ ನಡೆಸುವುದಕ್ಕೆ ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News