×
Ad

ಇಲಾಖೆಗಳ ವಿಲೀನದ ಮೂಲಕ ಆರ್ಥಿಕ ಮಿತವ್ಯಯಕ್ಕೆ ಮುಂದಾದ ರಾಜ್ಯ ಸರಕಾರ

Update: 2020-05-01 20:56 IST

ಬೆಂಗಳೂರು, ಮೇ. 1: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ರಾಜ್ಯ ಸರಕಾರ ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸಲು ಕೆಲ ಇಲಾಖೆಗಳ ವಿಲೀನಗೊಳಿಸುವ ಮೂಲಕ ಆರ್ಥಿಕ ಮಿತವ್ಯಯ ಹಾಗೂ ಆಡಳಿತ ಸುಧಾರಣೆಗೆ ಮುಂದಾಗಿದೆ.

ಈ ಸಂಬಂಧ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿ ಸಭೆ ನಡೆಸಿದ್ದು, ಅನಗತ್ಯ ಹುದ್ದೆಗಳ ಕಡಿತ ಹಾಗೂ ಕೆಲ ಇಲಾಖೆಗಳ ವಿಲೀನಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ಇನ್ನೂ ಹದಿನೈದು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದೆ ಎಂದು ಗೊತ್ತಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಮಾಜ ಕಲ್ಯಾಣ, ಕೃಷಿ ಮತ್ತು ತೋಟಗಾರಿಕೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅನಗತ್ಯ ಹುದ್ದೆಗಳನ್ನು ಕಡಿತ ಮಾಡಲು ಉದ್ದೇಶಿಸಿದೆ. ಇದೇ ವೇಳೆ ನಿಗಮ-ಮಂಡಳಿಗಳಲ್ಲಿನ ಹೆಚ್ಚುವರಿ ವೆಚ್ಚಕ್ಕೂ ಕಡಿವಾಣ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ.

ಅನಗತ್ಯ ಹುದ್ದೆಗಳ ರದ್ದು ಮಾಡುವುದು ಮತ್ತು ಕೆಲ ಇಲಾಖೆಗಳ ವಿಲೀನ ಮಾಡುವುದರಿಂದ ಸರಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಒಂದು ಅಂದಾಜಿನ ಪ್ರಕಾರ ಸುಮಾರು 2 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರಕಾರಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News