ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಡಿವೈಓ ಆನ್‍ಲೈನ್ ಅಭಿಯಾನ
ಬೆಂಗಳೂರು, ಮೇ. 1: ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಡುವವರಿಗೆ ಸುರಕ್ಷತಾ ಕಿಟ್ ಮತ್ತು ಮಾಸ್ಕ್ ಗಳನ್ನು ನೀಡಬೇಕು. ಕೋವಿಡ್-19 ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು. ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರನ್ನು ರಕ್ಷಿಸಬೇಕು. ಎಲ್ಲರಿಗೂ ಉದ್ಯೋಗ ಉಳಿಸುವುದು ಮತ್ತು ವೇತನ ಕೊಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಡಿವೈಓ, ಮೇ 1ರ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಆನ್‍ಲೈನ್ ಅಭಿಯಾನ ನಡೆಸಿತು.
ಕೋರೋನ ವೈರಸ್ ಸೋಂಕು ತಡೆಗಟ್ಟಲು 'ಸಾಮಾಜಿಕ ಅಂತರ' ಪದ ಬಳಕೆ ಸರಿಯಲ್ಲ. 'ದೈಹಿಕ ಅಂತರ' ಎಂಬ ಪದ ಬಳಕೆ ಮಾಡಬೇಕು. ಎಲ್ಲ ಬಡವರಿಗೆ ಪಿಡಿಎಸ್ ಮೂಲಕ ಆಹಾರ ತಲುಪಿಸಬೇಕು. ಎಫ್‍ಸಿಐ ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ಧಾನ್ಯವನ್ನು ಬಡವರಿಗೆ ಹಂಚಬೇಕು. ಎಲ್ಲ ನಿರುದ್ಯೋಗಿಗಳಿಗೆ ಮತ್ತು ಜನಧನ್ ಖಾತೆದಾರರಿಗೆ ಮುಂದಿನ ಆರು ತಿಂಗಳು ಮಾಸಿಕ 5 ಸಾವಿರ ರೂ. ಸಹಾಯ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಎಲ್ಲ ದಿನಬಳಕೆ ಸಾಮಾಗ್ರಿಗಳನ್ನು ಪಿಡಿಎಸ್ ಮೂಲಕ ಕನಿಷ್ಟ ಮೂರು ತಿಂಗಳು ಹಂಚಿಕೆ ಮಾಡಬೇಕು. ನರೇಗಾ ಅಡಿಯಲ್ಲಿ ಕನಿಷ್ಟ ದುಡಿಯುವ ದಿನಗಳ ಸಂಖ್ಯೆಯನ್ನು 200 ದಿನಗಳಿಗೆ ಏರಿಸಬೇಕು. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸಬೇಕೆಂದು ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ವಲಸೆ ಮತ್ತು ಕೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗ್ರಹಿಸಿದರು.