ಮಡಿಕೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

Update: 2020-05-01 15:58 GMT

ಮಡಿಕೇರಿ, ಮೇ.1: ಕಾಫಿ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ಕಂಬದ ಬಳಿ ಆನೆಗಳ ಕಾದಾಟ ಸಂದರ್ಭ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಬಲಿಯಾದ ಘಟನೆ ಪಾಲಿಬೆಟ್ಟ ಸಮೀಪ ಕಾಫಿ ತೋಟವೊಂದರಲ್ಲಿ ನಡೆದಿದೆ. 

ಅಂದಾಜು 10 ವರ್ಷ ಪ್ರಾಯದ ಗಂಡಾನೆ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಚೆನ್ನಂಗಿ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಹಾರ ಅರಿಸಿ ಕಾಫಿ ತೋಟಗಳತ್ತ ಬಂದಿದ್ದ ಆನೆಗಳ ಹಿಂಡುಗಳ ನಡುವೆ ರಾತ್ರಿ ಕಾದಾಟವಾಗಿದೆ ಎನ್ನಲಾಗಿದೆ. 

ಹನ್ನೊಂದು ಕೆವಿ ವಿದ್ಯುತ್ ಲೈನ್ ತೋಟದ ಮಾರ್ಗವಾಗಿ ಹಾದು ಹೋಗಿದ್ದು ವಿದ್ಯುತ್ ಕಂಬದ ಬಳಿ ಕಾಡಾನೆಗಳು ಕಾದಾಟದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದು ಗಂಡಾನೆಯೊಂದು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಅರಣ್ಯ ಇಲಾಖೆಯ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿ ಎರಡು ದಂತವನ್ನು ವಶಪಡಿಸಿಕೊಂಡು, ತೋಟದಲ್ಲಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಹೂಳಲಾಗಿದೆ. 

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಡಿಎಫ್‍ಒ ಶಿವಶಂಕರ್, ಆರ್ಎಫ್ಒ ಅಶೋಕ್, ಎಸಿಎಫ್ ಶ್ರೀಪತಿ,  ಹಾಗೂ ಚೆಸ್ಕಾಂ ಇಲಾಖಾಧಿಕಾರಿ ಸುರೇಶ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News