ಮಡಿಕೇರಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Update: 2020-05-01 16:40 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಮೇ 1: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಹಾಗೂ 96 ಸಾವಿರ ರೂ. ದಂಡ ವಿಧಿಸಿದೆ.

2019 ಮಾ.12 ರಂದು ಕೇರಳ ರಾಜ್ಯದ ಮಾನಂದವಾಡಿಯ ಗ್ರಾಮವೊಂದರ ನಿವಾಸಿ ಸಿ.ಡಿ. ನಿತಿನ್ ಎಂಬಾತ ಕೊಡಗು ಜಿಲ್ಲೆಯ ತನ್ನ ಪತ್ನಿಯ ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸಿಪಿಐ ಕೆ.ಎನ್.ನಾಗೇಗೌಡ ಅವರು ಪ್ರಕರಣದ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಆರೋಪಿ ಸಿ.ಡಿ.ನಿತಿನ್ ಗೆ ಶಿಕ್ಷೆ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಡಿ.ನಾರಾಯಣ ಅವರು ವಾದವನ್ನು ಸಮರ್ಪಕವಾಗಿ ಮಂಡಿಸಿದರು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ಕೆ.ಎನ್. ನಾಗೇಗೌಡ (ಹಿಂದಿನ ಸಿಪಿಐ, ಮಡಿಕೇರಿ ನಗರ ವೃತ್ತ) ಅವರ ತನಿಖೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News