65ರ ವ್ಯಕ್ತಿಗೆ 42 ದಿನಗಳಿಂದ ಆ್ಯಂಬುಲೆನ್ಸ್ ವಾಸ..: ಕಾರಣವೇನು ಗೊತ್ತೇ?

Update: 2020-05-02 06:10 GMT

ಬರೇಲಿ, ಮೇ 2: ಬಾಬು ಭಾರ್ತಿ (65) ಅವರ ರಮಝಾನ್ ಈ ಬಾರಿ ಭಿನ್ನ. ಅವರ ಪತ್ನಿ ಬಿಲ್ಕಿಸ್, ಇಫ್ತಾರ್‌ಗೆ ಬಿಸಿ ಸೆವಾಯಿ ಸಿದ್ಧಪಡಿಸುತ್ತಿಲ್ಲ; ಮೂವರು ಮಕ್ಕಳು ಹೊಸ ಬಟ್ಟೆ ಕೇಳುತ್ತಿಲ್ಲ. ಏಕೆ ಗೊತ್ತೇ? ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಚಾಲಕರಾಗಿರುವ ಇವರು 42 ದಿನಗಳಿಂದ ಪತ್ನಿ, ಮಕ್ಕಳ ಮುಖ ನೋಡಿಲ್ಲ. ಮಾರ್ಚ್ 23ರಿಂದಲೂ ಕೊರೋನಪೀಡಿತ ವಲಯದಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಇವರಿಗೆ ತುರ್ತು ವಾಹನವೇ ಮನೆ!

ಆ್ಯಂಬುಲೆನ್ಸ್‌ನಲ್ಲೇ ನಿದ್ದೆ ಮಾಡುತ್ತೇನೆ. ಕ್ಷೇತ್ರಕ್ಕೆ ಹೋದಾಗ ಕೊಳವೆಬಾವಿ ಕಂಡಲ್ಲಿ ಸ್ನಾನ. ನಾನು ಕೆಲಸ ಮಾಡುವ ಜಿಲ್ಲಾಸ್ಪತ್ರೆ ಆಹಾರದ ವ್ಯವಸ್ಥೆ ಮಾಡಿದೆ. ಕೊರೋನ ವಿರುದ್ಧದ ಹೋರಾಟದಲಲಿ ಜಯ ಗಳಿಸಿದ ಬಳಿಕವಷ್ಟೇ ನಾನು ಮನೆಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳುತ್ತಾರೆ.

ಜಿಲ್ಲೆಯಲ್ಲಿ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಭಾರ್ತಿ ನಮ್ಮ ತಂಡದಲ್ಲಿದ್ದಾರೆ ಎಂದು ಸಂಭಾಲ್ ಜಿಲ್ಲೆಯ ಕೋವಿಡ್-19 ವಿರುದ್ಧದ ಕ್ಷಿಪ್ರ ಪಡೆ ಮುಖ್ಯಸ್ಥ ಡಾ.ನೀರಜ್ ಶರ್ಮಾ ಹೇಳುತ್ತಾರೆ. ನಾವು ಸುಮಾರು 1100 ಕೋವಿಡ್-19 ಶಂಕಿತರನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದೇವೆ. ಈ ಪೈಕಿ 700 ಮಂದಿಯನ್ನು ಭಾರ್ತಿ ಕರೆದೊಯ್ದಿದ್ದಾರೆ. ಅವರ ಬದ್ಧತೆ ಅಸಾಮಾನ್ಯ. ಹಗಲು ರಾತ್ರಿ ಯಾವ ಸಮಯದಲ್ಲಿ ಕರೆದರೂ ಆ್ಯಂಬುಲೆನ್ಸ್‌ನೊಂದಿಗೆ ಸಿದ್ಧವಿರುತ್ತಾರೆ ಎಂದು ಅವರು ಹೇಳುತ್ತಾರೆ.

ಭಾರ್ತಿ ಮಾಸಿಕ 17 ಸಾವಿರ ರೂ. ವೇತನಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News