ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ಸಿಎಂಗೆ ಎಚ್.ಕೆ.ಪಾಟೀಲ್ ಪತ್ರ

Update: 2020-05-02 12:11 GMT

ಬೆಂಗಳೂರು, ಮೇ 2: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್‍ನಿಂದಾಗಿ 48 ದಿನಗಳಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಂತಿದೆ. ಇದೇ ಸಂದರ್ಭದಲ್ಲಿ ಸರಕಾರ ದೃಢ ನಿರ್ಧಾರ ಮಾಡಿ ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ಮದ್ಯಪಾನ ನಿಷೇಧ ಅತ್ಯಂತ ಕಠಿಣವಾದರೂ, ಇದು ಅತ್ಯಂತ ಶ್ರೇಷ್ಠ ಕೆಲಸ. ಈ ಸಂದರ್ಭವನ್ನು ಬಳಸಿಕೊಂಡು ರಾಜ್ಯದ ಜನತೆ ನೆಮ್ಮದಿ ಜೀವನ ನಡೆಸುವತ್ತ ಸರಕಾರ ಸಂಕಲ್ಪ ಮಾಡಬೇಕು. ಆ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ತತ್ವವನ್ನು ಆಡಳಿತದಲ್ಲಿ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕೆಂದು ಮಹಿಳಾ ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಅವರ ಹೋರಾಟವನ್ನು ಸರಕಾರ ಬೆಂಬಲಿಸಬೇಕು. ಅಲ್ಲದೆ. ಜನರು ಪರಿಶುದ್ಧ ಜೀವನ, ಸ್ವಚ್ಛ ಪರಿಸರ ಮತ್ತು ಲಕ್ಷಾಂತರ ಕುಟುಂಬಗಳಲ್ಲಿ ಕೌಟುಂಬಿಕ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಪಾಟೀಲ್ ಕೋರಿದ್ದಾರೆ.

ಮದ್ಯ ವ್ಯಸನದಿಂದ ಜಗಳ, ಅಶಾಂತಿ, ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದ್ದು, ಅಧಿಕಾರ ದುರುಪಯೋಗವೂ ಆಗುತ್ತಿದೆ. ಹೀಗಾಗಿ ಅಮಲು ಮುಕ್ತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಮದ್ಯಪಾನ ನಿಷೇಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮದ್ಯಪಾನದಿಂದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಮರಣಕ್ಕೆ ತುತ್ತಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.

ಮದ್ಯಪಾನದಿಂದ ಬಹುತೇಕ ಕುಟುಂಬಗಳ ಒಡೆದು ಹೋಗುತ್ತಿವೆ. ಸಾವಿರಾರು ಮಕ್ಕಳು ತಮ್ಮ ಸಹಜ ಬಾಲ್ಯ ಸುಖದಿಂದ ವಂಚಿತರಾಗುತ್ತಿದ್ದು, ಸುಶಿಕ್ಷಿತ ಸಮಾಜದಲ್ಲಿಯೂ ವಿವಾಹ ವಿಚ್ಚೇದನ ಹೆಚ್ಚಳವಾಗುತ್ತಿವೆ. ಹೀಗಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News