ಕೆಎಸ್‍ಆರ್ಟಿಸಿ ವಿಧಿಸಿದ್ದ ದುಬಾರಿ ಪ್ರಯಾಣ ದರಕ್ಕೆ ಸರಕಾರ ಕಡಿವಾಣ: ನಿಟ್ಟುಸಿರು ಬಿಟ್ಟ ಪ್ರಯಾಣಿಕರು

Update: 2020-05-02 12:49 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 2: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಕೆಎಸ್‍ಆರ್ಟಿಸಿ ವಿಧಿಸಿದ್ದ ದುಬಾರಿ ಪ್ರಯಾಣ ದರಕ್ಕೆ ಸರಕಾರ ಕಡಿವಾಣ ಹಾಕಿದೆ.

ಕಳೆದ ಎರಡು ದಿನಗಳಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದು ಮೊದಲ ದಿನ ಅವರನ್ನು ಉಚಿತವಾಗಿ ಕರೆದೊಯ್ಯಲಾಗಿದೆ. ಆದರೆ, ಈ ವ್ಯವಸ್ಥೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಮನಗಂಡು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದ ನಿಜವಾದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿ ದುಬಾರಿ ದುಡ್ಡು ನೀಡಿ ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು.

ಮೊದಲೇ ಕೆಲಸ ಇಲ್ಲ. ಊಟಕ್ಕೆ ದುಡ್ಡಿಲ್ಲ. ಇನ್ನು ನಮ್ಮ ಊರಿಗೆ ತೆರಳಲು ಸಾವಿರಾರು ರೂಪಾಯಿ ಎಲ್ಲಿಂದ ತರುವುದು ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದರು. ಕೆಎಸ್‍ಆರ್ಟಿಸಿ ವಲಸೆ ಕಾರ್ಮಿಕರಿಗೆ ದುಬಾರಿ ಪ್ರಯಾಣ ದರ ವಿಧಿಸಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು. ಇನ್ನು ಪ್ರತಿಪಕ್ಷಗಳ ನಾಯಕರು ಕೂಡಾ ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಲೇ ಪ್ರಯಾಣ ದರವನ್ನು ಕಡಿಮೆ ಮಾಡುವಂತೆ ಹಾಲಿ ಇರುವ ಪ್ರಯಾಣದರದಲ್ಲೇ ಅವರನ್ನು ಕರೆದುಕೊಂಡು ಹೋಗಬೇಕು ಎಂದು ಸಾರಿಗೆ ಸಂಸ್ಥೆಗಳಿಗೆ ಸೂಚಿಸಿದರಲ್ಲದೆ, ಸಾರಿಗೆ ಸಂಸ್ಥೆಗೆ ಬಾಕಿ ಮೊತ್ತವನ್ನು ಕಾರ್ಮಿಕ ಇಲಾಖೆ ಪಾವತಿ ಮಾಡುವಂತೆ ಸೂಚಿಸಿದ್ದಾರೆ.

ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಕೆಂಪೇಗೌಡ ಬಸ್ ನಿಲ್ದಾಣದತ್ತ ಮುಖ ಮಾಡಿದ್ದಾರೆ. ಅವರು ಊರಿಗೆ ತೆರಳುವ ಮುನ್ನ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಜೊತೆಗೆ ವೈದ್ಯಕೀಯ ತಪಾಸಣೆ ಮಾಡಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರತಿ ಬಸ್‍ನಲ್ಲಿ 30 ಮಂದಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ.

ಇದರಿಂದ ಕೆಎಸ್‍ಆರ್ಟಿಸಿ ಪ್ರಯಾಣದರವನ್ನು ದುಪ್ಪಟ್ಟು ಮಾಡಿತ್ತು. ಬಾಗಲಕೋಟೆಗೆ 700 ರೂ. ಬದಲು 1,311 ರೂ. ಪಡೆಯಲಾಗುತ್ತಿತ್ತು. ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂ. ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿತ್ತು. ಇದಕ್ಕೆ ಕೆಎಸ್‍ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿ ಬಸ್‍ಗಳು ಇಲ್ಲಿಂದ ತೆರಳಿ ಆ ಕಡೆಯಿಂದ ಖಾಲಿ ಬರುತ್ತವೆ. ಇದರಿಂದ ನಷ್ಟವಾಗುವುದರಿಂದ ಎರಡು ಕಡೆಯ ದರವನ್ನು ನಿಗದಿ ಮಾಡಲಾಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News