×
Ad

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ: ಮೇ 4ರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ಸರಕಾರ

Update: 2020-05-02 19:56 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 2: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧ ಕೊನೆಗೂ ತೆರವುಗೊಳಿಸಿದ್ದು, ಮೇ 4ರಿಂದ 'ಕಂಟೈನ್ಮೆಂಟ್ ಝೋನ್' ಹೊರತುಪಡಿಸಿ ಉಳಿದೆಡೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಮೂಲಕ ಮದ್ಯ ಪ್ರಿಯರಿಗೆ ರಾಜ್ಯ ಸರಕಾರ ಸಂತಸದ ಸುದ್ದಿಯೊಂದನ್ನು ನೀಡಿದೆ.

ಸಿಎಲ್-2 ಮತ್ತು ಸಿಎಲ್-11 'ಸಿ'(ಎಂಎಸ್‍ಐಎಲ್)ಗಳನ್ನು ತೆರೆದು ಮದ್ಯ ಮಾರಾಟ ಮಾಡುವ ಹಾಗೂ ಕೆಎಸ್‍ಬಿಸಿಎಲ್ ಡಿಪೋಗಳು ಮೇ 4ರಿಂದ ಕಾರ್ಯ ನಿರ್ವಹಿಸಲು ಕೇಂದ್ರ ಸರಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ಕೆಲ ಷರತ್ತುಗಳನ್ನು ವಿಧಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಬಕಾರಿ ಆಯುಕ್ತ ಡಾ.ಲೋಕೇಶ್ ಆದೇಶ ಹೊರಡಿಸಿದ್ದಾರೆ.

ಷರತ್ತು: ಕೊರೋನ ವೈರಸ್ ಸೋಂಕಿತರಿರುವ 'ಕಂಟೈನ್ಮೆಂಟ್ ಝೋನ್'ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಸಿಎಲ್-2 ಮತ್ತು ಸಿಎಲ್-11 'ಸಿ'(ಎಂಎಸ್‍ಐಎಲ್)ಗಳನ್ನು ಹಾಗೂ ಕೆಎಸ್‍ಬಿಸಿಎಲ್ ಡಿಪೋಗಳು ಮಾತ್ರವೇ ಬೆಳಗ್ಗೆ 9 ಗಂಟೆಯಿಂದ ಸಂಜೆ 7ಗಂಟೆಯ ವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು.

'ಸನ್ನದ್ದು' ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆ ಹಾಗೂ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದ್ಯ ಮಾರಾಟ ಮಾಡುವ ಸನ್ನದ್ದಿನಲ್ಲಿನ ನೌಕರರು ಮತ್ತು ಮದ್ಯ ಖರೀದಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸನ್ನದ್ದು ಸ್ಥಳದಲ್ಲಿ ಸ್ಯಾನಿಟೈಸರ್ ಬಳಸಬೇಕು. ಮಾಲ್‍ಗಳು ಹಾಗೂ ಸೂಪರ್ ಮಾರ್ಕೆಟ್‍ಗಳಲ್ಲಿ ಸದರಿ ಸನ್ನದ್ದು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ.

ಮೇಲಿನ ಎಲ್ಲ ಷರತ್ತುಗಳನ್ನು ಪಾಲಿಸಿ ಅಬಕಾರಿ ಕಾಯ್ದೆ ಅನ್ವಯ ಮದ್ಯ ಮಾರಾಟ ಮಾಡಬೇಕು. ಈ ಆದೇಶವನ್ನು ಅಬಕಾರಿ ಉಪ ಆಯುಕ್ತರು ಪರಿಪೂರ್ಣವಾಗಿ ಜಾರಿ ಮಾಡಬೇಕು. ಈ ಆದೇಶವನ್ನು ಉಲ್ಲಂಘಿಸಿದರೆ 'ಸನ್ನದ್ದು' ಅಮಾನತ್ತು/ರದ್ದುಪಡಿಸಲು ಕ್ರಮ ಜರುಗಿಸಬೇಕು ಎಂದು ಅಬಕಾರಿ ಆಯುಕ್ತರು ತಮ್ಮ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News