×
Ad

ಲಾಕ್‍ಡೌನ್ ವಿಸ್ತರಣೆ: ಮೇ 4ರಿಂದ ರಾಜ್ಯದ ಯಾವ ಝೋನ್ ನಲ್ಲಿ ಏನೆಲ್ಲಾ ಇರಲಿವೆ..? ಇಲ್ಲಿದೆ ಮಾಹಿತಿ

Update: 2020-05-02 20:50 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 2: ಕೋವಿಡ್-19(ಕೊರೋನ) ವೈರಾಣು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮೇ 3ರವರೆಗೆ ಘೋಷಿಸಿದ್ದ ಲಾಕ್‍ಡೌನ್ ಮೇ 17ರವರೆಗೆ ವಿಸ್ತರಣೆಯಾಗಿರುವುದರಿಂದ, ಮೇ 4ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರವು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳಲ್ಲಿನ ಚಟುವಟಿಕೆಗಳ ಕುರಿತು ಕೆಲವು ವಿನಾಯಿತಿಗಳನ್ನು ನೀಡಿ ಹೊಸ ಮಾರ್ಗಸೂಚಿಗಳನ್ನು ಶನಿವಾರ ಪ್ರಕಟಿಸಿದೆ.

ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಮಾನಯಾನ, ರೈಲುಗಳ ಸಂಚಾರ, ಅಂತರ್ ರಾಜ್ಯ ಬಸ್ಸುಗಳ ಸಂಚಾರ, ಮೆಟ್ರೋ ರೈಲುಗಳ ಸಂಚಾರ ನಿಷೇಧ(ವೈದ್ಯಕೀಯ ಕಾರಣಗಳು, ಏರ್ ಆ್ಯಂಬುಲೆನ್ಸ್ ಹಾಗೂ ಕೇಂದ್ರ ಗೃಹ ಇಲಾಖೆ ಅವಕಾಶ ನೀಡುವುದನ್ನು ಹೊರತುಪಡಿಸಿ). ಎಲ್ಲ ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ, ತರಬೇತಿ ಸಂಸ್ಥೆಗಳು ತೆರೆಯುವಂತಿಲ್ಲ.

ಚಲನಚಿತ್ರ ಮಂದಿರಗಳು, ಶಾಪಿಂಗ್ ಮಾಲ್‍ಗಳು, ಜಿಮ್, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಪಾರ್ಕ್, ಬಾರ್ ಹಾಗೂ ಸಭಾಂಗಣಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಎಲ್ಲ ಚಟುವಟಿಕೆಗಳಿಗೆ ನಿಷೇಧ. ಧಾರ್ಮಿಕ ಕೇಂದ್ರಗಳು ತೆರೆಯುವಂತಿಲ್ಲ.

ಅಗತ್ಯ ಸೇವೆಗಳು ಹೊರತುಪಡಿಸಿ ಇನ್ನುಳಿದಂತಹ ಚಟುವಟಿಕೆಗಳು ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ನಿಷೇಧಿಸಲಾಗಿದೆ. ಎಲ್ಲ ವಲಯಗಳಲ್ಲೂ 65 ವರ್ಷ ಮೇಲ್ಪಟ್ಟವರು, ಗರ್ಭಿಣಿ ಮಹಿಳೆಯರು, 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳು ಮನೆಯಲ್ಲಿರಬೇಕು.

ಕಂಟೈನ್ಮೆಂಟ್ ವಲಯಗಳಲ್ಲಿ ಹೊರ ರೋಗಿಗಳ ವಿಭಾಗ ಹಾಗೂ ಕ್ಲಿನಿಕ್‍ಗಳು ತೆರೆಯುವಂತಿಲ್ಲ. ಕೆಂಪು, ಕಿತ್ತಳೆ ಹಾಗು ಹಸಿರು ವಲಯಗಳಲ್ಲಿ ಸುರಕ್ಷಿತ ಅಂತರ ಹಾಗೂ ಇನ್ನಿತರ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಆಧರಿಸಿ ಅವಕಾಶ ಕಲ್ಪಿಸಬಹುದಾಗಿದೆ.

ಕಂಟೈನ್ಮೆಂಟ್ ವಲಯದಲ್ಲಿನ ಚಟುವಟಿಕೆಗಳು: ಕಡ್ಡಾಯವಾಗಿ ಕಂಟೈನ್ಮೆಂಟ್ ವಲಯದ ಪರಿಧಿಯನ್ನು ನಿಯಂತ್ರಿಸಬೇಕು. ಈ ಪ್ರದೇಶದಲ್ಲಿ ಪ್ರವೇಶ ಹಾಗೂ ನಿರ್ಗಮದ ಸ್ಥಳಗಳನ್ನು ಗುರುತಿಸಬೇಕು. ಅಗತ್ಯ ವಸ್ತುಗಳು ಹಾಗೂ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಜನರ ಓಡಾಟಕ್ಕೆ ಅನುಮತಿ. ತಪಾಸಣೆ ಇಲ್ಲದೆ ಯಾವುದೇ ವ್ಯಕ್ತಿ ಅಥವಾ ಸಂಚಾರಕ್ಕೆ ಈ ಪರಿಧಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ. ದಿನನಿತ್ಯ ಜನರ ಓಡಾಟದ ರೆಕಾರ್ಡಿಂಗ್ ಆಗಬೇಕು.

ಕೆಂಪು ವಲಯ(ಹಾಟ್ ಸ್ಪಾಟ್)ದಲ್ಲಿನ ಚಟುವಟಿಕೆಗಳು: ಸೈಕಲ್ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ ಹಾಗೂ ಕ್ಯಾಬ್, ಅಂತರ್ ಜಿಲ್ಲಾ ಸಂಚಾರ, ಕ್ಷೌರದ ಅಂಗಡಿ, ಸ್ಪಾ ಹಾಗೂ ಸೆಲೂನ್‍ಗಳು ತೆರೆಯುವಂತಿಲ್ಲ. ನಾಲ್ಕು ಚಕ್ರಗಳ ವಾಹನಗಳಲ್ಲಿ ಕೇವಲ ಇಬ್ಬರು ಪ್ರಯಾಣಿಸಲು ಅವಕಾಶ. ಚಾಲಕನ ಹಿಂಬದಿಯ ಆಸನದಲ್ಲಿ ಪ್ರಯಾಣಿಕ ಕೂರಬೇಕು. ದ್ವಿಚಕ್ರ ವಾಹನದಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ. ಹಿಂಬದಿಯ ಸವಾರರಿಗೆ ಅವಕಾಶವಿಲ್ಲ.

ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ಚಟುವಟಿಕೆ: ವಿಶೇಷ ಆರ್ಥಿಕ ವಲಯ, ರಫ್ತು ಸಂಬಂಧಿತ ಘಟಕಗಳು, ಕೈಗಾರಿಕೆ ಎಸ್ಟೇಟ್ ಹಾಗೂ ಕೈಗಾರಿಕೆ ಟೌನ್‍ಶಿಪ್‍ಗಳಿಗೆ ಅವಕಾಶ. ವೈದ್ಯಕೀಯ ಉಪಕರಣಗಳು, ಔಷಧಗಳ ತಯಾರಿಕೆ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನ ಘಟಕಗಳಿಗೆ ಅವಕಾಶ. ಐಟಿ ಹಾರ್ಡ್‍ವೇರ್ ಹಾಗೂ ಸೆಣಬಿನ ಉದ್ಯಮದಲ್ಲಿ ಪಾಳಿ ವ್ಯವಸ್ಥೆ ಹಾಗೂ ಸುರಕ್ಷತ ಅಂತರವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಬಗೆಯ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ.

ನಗರ ಪ್ರದೇಶಗಳಲ್ಲಿ ಎಲ್ಲ ಮಾಲ್‍ಗಳು, ಮಾರುಕಟ್ಟೆ ಸಂಕೀರ್ಣಗಳು ಹಾಗೂ ಮಾರುಕಟ್ಟೆ ಪ್ರದೇಶಗಳು ಮುಚ್ಚಿರುತ್ತವೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಈ ಸ್ಥಳಗಳಲ್ಲಿ ಅವಕಾಶ. ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಇ-ಕಾಮರ್ಸ್ ಮೂಲಕ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ.

ಖಾಸಗಿ ಕಚೇರಿಗಳು ಶೇ.33ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಹುದಾಗಿದೆ. ಕೇಂದ್ರ ಸರಕಾರದ ಕಚೇರಿಗಳಲ್ಲಿ ಉಪ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲ್ಪಟ್ಟವರ ಶೇ.100ರಷ್ಟು ಹಾಜರಾತಿ ಇರಬೇಕು. ಇನ್ನುಳಿದಂತೆ ಶೇ.33ರಷ್ಟು ಸಿಬ್ಬಂದಿಗಳು ಇರಬೇಕು.

ರಕ್ಷಣೆ ಹಾಗೂ ಭದ್ರತಾ ಸೇವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕಾರಾಗೃಹ, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿ ಮತ್ತು ತುರ್ತು ಸೇವೆಗಳು, ವಿಕೋಪ ನಿರ್ವಹಣೆ ಹಾಗೂ ಸಂಬಂಧಪಟ್ಟ ಸೇವೆಗಳು, ಎನ್‍ಐಸಿ, ಕಸ್ಟಮ್ಸ್, ಎಫ್‍ಸಿಐ, ಎನ್‍ಸಿಸಿ, ಎನ್‍ವೈಕೆ ಹಾಗೂ ಮುನ್ಸಿಪಲ್ ಸೇವೆಗಳು ಯಾವುದೆ ನಿಬಂಧನೆಗಳು ಇಲ್ಲದೆ ಕಾರ್ಯನಿರ್ವಹಿಸಲಿವೆ.

ಕಿತ್ತಳೆ ವಲಯದಲ್ಲಿನ ಚಟುವಟಿಕೆಗಳು: ಅಂತರ್ ಜಿಲ್ಲಾ ಬಸ್ಸುಗಳ ಸಂಚಾರ ಇಲ್ಲ. ಟ್ಯಾಕ್ಸಿ ಮತ್ತು ಕ್ಯಾಬ್‍ಗಳಲ್ಲಿ ಚಾಲಕ ನೊಂದಿಗೆ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ. ಅಂತರ್ ಜಿಲ್ಲಾ ಮಟ್ಟದಲ್ಲಿ ವಾಹನಗಳ ಸಂಚಾರಕ್ಕೆ ಶರತ್ತುಬದ್ಧ ಅನುಮತಿ. ನಾಲ್ಕು ಚಕ್ರಗಳ ವಾಹನದಲ್ಲಿ ಚಾಲಕ ಹೊರತುಪಡಿಸಿ ಇಬ್ಬರು ಪ್ರಯಾಣಿಕರಿಗೆ(ಚಾಲಕನ ಹಿಂಬದಿಯ ಆಸನದಲ್ಲಿ) ಮಾತ್ರ ಅವಕಾಶ.

ಹಸಿರು ವಲಯದಲ್ಲಿನ ಚಟುವಟಿಕೆಗಳು: ಎಲ್ಲ ಬಗೆಯ ಚಟುವಟಿಕೆಗಳಿಗೆ ಅವಕಾಶ. ಬಸ್ಸುಗಳು ಶೇ.50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಿಕೊಂಡು ಸಂಚರಿಸಲು ಅವಕಾಶ. ಅಂತರ್ ರಾಜ್ಯಮಟ್ಟದಲ್ಲಿ ಸಂಚರಿಸುವಂತಹ ಅಗತ್ಯ ವಸ್ತುಗಳನ್ನು ಹೊತ್ತು ತರುವ ಅಥವಾ ಖಾಲಿ ಟ್ರಕ್ಕುಗಳ ಸಂಚಾರಕ್ಕೆ ಎಲ್ಲ ಜಿಲ್ಲೆಗಳು ಅವಕಾಶ ಕಲ್ಪಿಸಬೇಕು. ಮೇ 3ರವರೆಗೆ ಅವಕಾಶ ಪಡೆದುಕೊಂಡು ಸಂಚರಿಸುತ್ತಿರುವ ಅಗತ್ಯ ವಸ್ತುಗಳ ವಾಹನಗಳಿಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪುನಃ ಒಪ್ಪಿಗೆ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News