ಪ್ರಧಾನಿ ಮೋದಿ ಸರಕಾರ ಇದ್ದರೂ ಸತ್ತಂತೆ: ಕೇಂದ್ರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

Update: 2020-05-02 16:39 GMT

ಬೆಂಗಳೂರು, ಮೇ 2: ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಪೌಷ್ಠಿಕ ಆಹಾರ ಪದಾರ್ಥಗಳ ದುರ್ಬಳಕೆ ಆಗುತ್ತಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಇದ್ದರೂ ಸತ್ತಂತೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ರಾಜ್ಯ ಮತ್ತು ಮಹಿಳಾ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೇಂದ್ರದಲ್ಲಿಡಲಾಗಿತ್ತು. ಆದರೆ, ಇಲ್ಲಿನ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರಿಗೆ ಮನುಷ್ಯತ್ವ ಇದ್ದಿದ್ದರೆ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು ಎಂದು ಹೇಳಿದರು. 

ಅಕ್ರಮ ಕುರಿತು ಇದುವರೆಗೂ ಒಬ್ಬ ನಾಯಕ ಕೂಡ ಮಾತನಾಡಿಲ್ಲ. ನರೇಂದ್ರ ಮೋದಿ ಅವರ ಸರಕಾರ ಇದ್ದರೂ ಸತ್ತಂಗೆ ಎಂದ ಅವರು, ಅಂಗನವಾಡಿಗೆ ಹೋಗುವ ಬಡ ಮಕ್ಕಳ ಅನ್ನವನ್ನು ನೀವು ಕದ್ದು ತಿನ್ನುತ್ತಿದ್ದೀರಿ. ಈ ಇಲಾಖೆಯಲ್ಲಿ ಆಹಾರ ಪದಾರ್ಥ ಹೆಚ್ಚಾಗಿ ಉಳಿದಿದ್ದರೆ, ಸರಕಾರದ ಹೆಸರಲ್ಲೇ ಅನ್ನ ಬಡವರಿಗೆ ಕೂಲಿ ಕಾರ್ಮಿಕರಿಗೆ ಹಂಚಬಹುದಿತ್ತು. ಆದರೆ, ಬಿಜೆಪಿ ನಾಯಕರ ಹೆಸರಲ್ಲಿ ಹಂಚುವ ಅವಶ್ಯಕತೆ ಏನಿತ್ತು. ನಿಮ್ಮ ಬಳಿ ಹಣವಿಲ್ಲ ಅಂದರೆ ಬಿಡಿ. ನೀವು ಹಂಚಬೇಕು ಎಂದು ನಿಮ್ಮನ್ನು ಯಾರೂ ಗೋಗರೆದಿಲ್ಲ. ಪಕ್ಷಕ್ಕೆ ಪ್ರಚಾರ ಪಡೆಯಲು ಮಕ್ಕಳು ಹಾಗೂ ಗರ್ಭಿಣಿಯರ ಅನ್ನಕ್ಕೆ ಕೈಹಾಕದ್ದೀರಲ್ಲಾ ಮುಖ್ಯಮಂತ್ರಿಗಳೇ ಈ ರಾಜ್ಯದಲ್ಲಿ ನ್ಯಾಯ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಕೆಲ ದಿನಗಳಿಂದ ಬಿಜೆಪಿ ನಾಯಕರು ತಾವು ದಾನ ಶೂರರಂತೆ ಬಿಂಬಿಸಿಕೊಳ್ಳುತ್ತಿರುವುದು ಸರಕಾರದ ಅಕ್ಕಿ ಬೇಳೆಯನ್ನು ನೀಡಿ ಎಂಬುದು ಗೊತ್ತಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಗೌರವ ಇದ್ದರೆ, ಈ ಕೂಡಲೇ ತಪ್ಪು ಮಾಡಿದವರನ್ನು ಬಂಧಿಸಿ. ಅಷ್ಟೇ ಅಲ್ಲದೆ, ಈ ಅಕ್ರಮಗಳ ವಿಚಾರದಲ್ಲಿ ಹೈ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News