ಅಕ್ರಮದಲ್ಲಿ ಬಿಎಸ್‌ವೈ ಸೇರಿ ಹಲವು ಸಚಿವರು ಭಾಗಿಯಾಗಿರುವ ಅನುಮಾನ: ವಿ.ಎಸ್.ಉಗ್ರಪ್ಪ ಆರೋಪ

Update: 2020-05-02 17:29 GMT

ಬೆಂಗಳೂರು, ಮೇ 2: ಸರಕಾರಿ ದಿನಸಿ ಸಾಮಗ್ರಿಗಳ ಮೇಲೆ ಬಿಜೆಪಿ ಪಕ್ಷದ ಪ್ರಚಾರ ಪ್ರಕರಣದ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಹಾಗಾಗಿ, ಈ ಅಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ಸಚಿವರೇ ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದಾದರೂ, ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ನೋಡಿದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿರುವ ಅನುಮಾನ ಮೂಡುತ್ತಿದೆ ಎಂದರು.

ಅಲ್ಲದೆ, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಿಜೆಪಿಯ ಕೆಲ ನಾಯಕರೇ ಆರೋಪಿಗಳಾಗಿದ್ದು, ಐಪಿಸಿ 403, 406, 420 ಪ್ರಕರಣ ದಾಖಲಿಸಲಾಗಿದೆ. ಇದು ಜಾಮೀನು ರಹಿತ, ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡಬಹುದಾದ ಅಪರಾಧವಾಗಿದೆ. ಅಪರಾಧಿಗಳಿಗೆ 7 ವರ್ಷ ಜೈಲು ಹಾಗೂ ದಂಡ ವಿಧಿಸಬಹುದು ಎಂದು ವಿವರಿಸಿದರು.

ಅಕ್ಕಿ, ಗೋಧಿ, ಸಕ್ಕರೆ ಸೇರಿದಂತೆ 10 ಪದಾರ್ಥಗಳು ಕೇಂದ್ರ ಸರಕಾರದಿಂದ ಪುಕ್ಕಟೆಯಾಗಿ ಬರುತ್ತದೆ. 1,200 ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗಬೇಕಿದ್ದ ಪದಾರ್ಥಗಳನ್ನು ತಮ್ಮ ವಸ್ತು ಎಂದು ಹೇಳಿ ಪಕ್ಷದ ಹೆಸರು ಹಾಕಿಕೊಂಡು ವಿತರಣೆ ಮಾಡಿರುವುದು ಸರಕಾರಕ್ಕೆ ಮಾಡಿರುವ ಮೋಸ. ಇದುವರೆಗೂ ಬೇರೆ ಬೇರೆ ನಾಯಕರಿಗೆ ಒಟ್ಟು 7 ಲಕ್ಷದ 20 ಸಾವಿರ ಪ್ಯಾಕೆಟ್‍ಗಳು ಹಂಚಿಕೆಯಾಗಿವೆ. ಇದನ್ನು ನೋಡಿದರೆ ಕೊರೋನ ನೆಪದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿ, ಲೂಟಿ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News