ಲಾಕ್‍ಡೌನ್‍: ರಾಜ್ಯಾದ್ಯಂತ 1.57 ಲಕ್ಷ ಕುಟುಂಬಗಳಿಗೆ ಆಸರೆಯಾದ ಜಮಾಅತೆ ಇಸ್ಲಾಮೀ ಹಿಂದ್

Update: 2020-05-02 17:32 GMT

ಬೆಂಗಳೂರು, ಮೇ 2: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 1,57,295 ಕುಟುಂಬಗಳಿಗೆ ಊಟ, ಆಹಾರ ಕಿಟ್ ಹಾಗೂ ಹಣದ ಸಹಾಯ ಮಾಡುವ ಮೂಲಕ ಜಮಾಅತೆ ಇಸ್ಲಾಮೀ ಹಿಂದ್(ಕ) ಆಸರೆಯಾಗಿದೆ.

ಶನಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್(ಕ) ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ರಾಜ್ಯ ವ್ಯಾಪ್ತಿಯ 30 ಜಿಲ್ಲೆಗಳಲ್ಲಿ 44,245 ಆಹಾರ ಕಿಟ್, 1,12,036 ಮಂದಿಗೆ ಊಟ ಹಾಗೂ 13.12 ಲಕ್ಷ ರೂ. ಹಣವನ್ನು ಬಡವರಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಏಕಾಏಕಿ ಲಾಕ್‍ಡೌನ್ ಚಾಲ್ತಿಯಾದ ಪರಿಣಾಮ ಕೂಲಿಕಾರ್ಮಿಕರು, ನಿರಾಶ್ರಿತರು ಹಾಗೂ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ, ರಾಷ್ಟ್ರವ್ಯಾಪ್ತಿ ಅಗತ್ಯವುಳ್ಳವರ ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಘಟಕದಿಂದ ಎ.29ರವರೆಗೂ ಸುಮಾರು 23.73 ಕೋಟಿ ರೂ. ಅರ್ಹ ಕುಟುಂಬಗಳಿಗೆ ಖರ್ಚು ಮಾಡಲಾಗಿದೆ. ಪ್ರಮುಖವಾಗಿ ಆಹಾರ ಕಿಟ್ ಮತ್ತು ಚಿಕಿತ್ಸಾ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೂಲಿ ಕಾರ್ಮಿಕರು, ಬಡ-ಸಾಮಾನ್ಯ ವರ್ಗ, ಸಣ್ಣ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳುವ ರೀತಿಯಲ್ಲಿ ಸರಕಾರ ಅವರಿಗೆ ತುರ್ತು ಸಹಾಯ ಮಾಡಬೇಕು ಎಂದ ಅವರು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿಗಳಾದ ಮೌಲಾನ ವಹೀದುದ್ದೀನ್ ಖಾನ್ ಉಮರಿ, ಅಕ್ಬರ್ ಅಲಿ, ಉಪಾಧ್ಯಕ್ಷ ಮುಹಮ್ಮದ್ ಯೂಸುಫ್, ಮಾಧ್ಯಮ ಸಂಯೋಜಕ ಲಈಶುಲ್ಲಾ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News